ನ್ಯೂಜಿಲೆಂಡ್‍ : ಗನ್‍ಮ್ಯಾನ್ ಅಟ್ಟಹಾಸಕ್ಕೆ 40ಕ್ಕೂ ಹೆಚ್ಚು ಮಂದಿ ಸಾವು , ಬಾಂಗ್ಲಾ ಕ್ರಿಕೆಟಿಗರು ಬಜಾವ್..!

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಸ್ಟ್‍ಚರ್ಚ್/ವೆಲ್ಲಿಂಗ್ಟನ್, ಮಾ.15- ನ್ಯೂಜಿಲೆಂಡ್‍ನ ಚರ್ಚ್‍ಸ್ಟ್ರೀಟ್‍ನ ಎರಡು ಮಸೀದಿಗಳ ಮೇಲೆ ಬಂದೂಕುದಾರಿಯೊಬ್ಬ ನಡೆಸಿದ ಭೀಕರ ಗುಂಡಿನ 40ಕ್ಕೂ ಹೆಚ್ಚು ಮಂದಿ  ಮೃತಪಟ್ಟು, ಅನೇಕರು ಗಾಯಗೊಂಡಿದ್ಧಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಹಠಾತ್ ದಾಳಿ ಹಿನ್ನಲೆಯಲ್ಲಿ ಭಯೋತ್ಪಾದಕನ ಕೈವಾಡ ಇವೆ ಎಂದು ಶಂಕಿಸಲಾಗಿದ್ದು, ನ್ಯೂಜಿಲೆಂಡ್‍ನಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ನಂತರ ದೇಶಾದೈಂತ ಕಟ್ಟೆಚ್ಚರ ವಹಿಲಾಗಿದೆ.

ಈ ಕುಕೃತ್ಯವನ್ನು ಉಗ್ರವಾಗಿ ಖಂಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರೆನ್ ಈ ಗುಂಡಿನ ದಾಳಿಯು ನ್ಯೂಜಿಲೆಂಡ್‍ನ ಅತ್ಯಂತ ಕರಾಳ ದಿನಗಳಲ್ಲಿ ಒಂದು ಎಂದು ವಿಷಾದದಿಂದ ನುಡಿದಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ  ಆಟಗಾರರು ಈ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ವಿಧ್ವಂಸಕ ಕೃತ್ಯದ ಹಿನ್ನಲೆಯಲ್ಲಿ ನ್ಯೂಜಿಲೆಂಡ್-ಬಾಂಗ್ಲಾದೇಶ ಟೆಸ್ಟ್ ಪಂದ್ಯ ರದ್ದಾಗಿದೆ.

ಕ್ರಿಸ್ಟ್‍ಚರ್ಚ್‍ನ ಹ್ಯಾಗ್ಲೆ ಪಾರ್ಕ್‍ನಲ್ಲಿನ ಅಲ್ ನೂರಿ ಅವಳಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಟೆಲ್‍ನಿಂದ ಬಾಂಗ್ಲಾ ಕ್ರಿಕೆಟ್ ತಂಡ ಅಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಗನ್‍ಮಾನ್ ಎರಡು ಮಸೀದಿಗಳ ಬಳಿ ಜಮಾಯಿಸಿದ್ದ ಜನರ ಮೇಲೆ ಮನಬಂದಂತೆ ಸ್ವಯಂಚಾಲಿತ ರೈಫಲ್‍ನಿಂದ ಗುಂಡಿನ ಸುರಿಮಳೆಗರೆದ.

ಈ ದಾಳಿಯಲ್ಲಿ ಹಲವರು ಮೃತಪಟ್ಟು, ಅನೇಕರು ಗಾಯಗೊಂಡರು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ಧಾರೆ.

ಬಾಂಗ್ಲಾ ಕ್ರಿಕೆಟ್ ಆಟಗಾರರನ್ನೂ ಸಹ ಗುರಿಯಾಗಿಟ್ಟುಕೊಂಡು ಈ ದಾಳಿ ಡನೆಸಲಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ದಾಳಿ ವೇಳೆ ಮಸೀದಿ ಬಳಿ ಇದ್ದ ಆಟಗಾರರು ತಕ್ಷಣ ಎಚ್ಚೆತ್ತುಕೊಂಡು ಅಲ್ಲಿಂದ ಓಡಿ ಹೋದ ಕಾರಣ ತಂದಡದಲ್ಲಿ ಸಾವು-ನೋವು ಸಂಭವಿಸಿಲ್ಲ.

ಬಾಂಗ್ಲಾದೇಶದ ಓಪನಿಂಗ್ ಬ್ಯಾಟ್ಸ್‍ಮ್ಯಾನ್ ತಮೀಮ್ ಇಕ್ಬಾಲ್ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶೂಟರ್‍ನಿಂದ ನಾವೆಲ್ಲರೂ ಪಾರಾಗಿದ್ದೇವೆ ಎಂದು ಅವರು ಹೇಳಿದ್ಧಾರೆ.

ಈ ಘಟನೆ ಹಿನ್ನೆಲೆಯಲ್ಲಿ ಕ್ರಿಸ್ಟ್‍ಚರ್ಚ್ ಹ್ಯಾಗ್ಲೆ ಓವಲ್ ಗ್ರೌಂಡ್ಸ್‍ನಲ್ಲಿ ಶನಿವಾರ ನಡೆಯಬೇಕಿದ್ದ ನ್ಯೂಜೆಲೆಂಡ್-ಬಾಂಗ್ಲಾದೇಶ ನಡುವಣ ಮೂರನೆ ಮತ್ತು ಕೊನೆ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಬಾಂಗ್ಲಾದ ನ್ಯೂಜಿಲೆಂಡ್ ಪ್ರವಾಸ ಮೊಟಕುಗೊಂಡಂತಾಗಿದೆ.

ಗನ್‍ಮ್ಯಾನ್ ಅಟ್ಟಹಾಸದ ಸುದ್ದಿ ತಿಳಿದ ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ಪರಾರಿಯಾಗಿರುವ ಹಂತಕನಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ. ಈ ಘಟನೆ ನಂತರ ಕ್ರಿಸ್ಟ್‍ಚರ್ಚ್ ಮತ್ತು ಸೌತ್ ಐಲ್ಯಾಂಡ್ ಪ್ರದೇಶಗಳನ್ನು ಪೊಲೀಸರು ಬಂದ್ ಮಾಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಇದು ಏಕೈಕ ಗನ್‍ಮ್ಯಾನ್ ಕೃತ್ಯವೇ ಆಥವಾ ಭಯೋತ್ಪಾದಕರ ಕೈವಾಡವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

[ # ಎಚ್ಚರಿಕೆ : ‘ಈ ಸಂಜೆ’ ಸುದ್ದಿಗಳನ್ನು ನಕಲಿಸುವವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗುವುದು ]

Facebook Comments

Sri Raghav

Admin