ಗುಂಡಿನ ದಾಳಿ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಸ್ಟ್‍ಚರ್ಚ್, ಮಾ.15-ಹಲವು ಜನರ ಸಾವಿಗೆ ಕಾರಣವಾದ ಮಸೀದಿ ಮೇಲೆ ಗನ್‍ಮ್ಯಾನ್ ನಡೆಸಿದ ಗುಂಡಿನ ದಾಳಿ ನಂತರ ಬಾಂಗ್ಲಾ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಹ್ಯಾಗ್ಲೆ ಪಾರ್ಕ್‍ನಲ್ಲಿರುವ ಅಲ್ ನೂರ್ ಮಸೀದಿಯನ್ನು ಬಾಂಗ್ಲಾ ಕ್ರಿಕೆಟ್ ಆಟಗಾರರು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಮುಸುಕುಧಾರಿ ಗನ್‍ಮ್ಯಾನ್ ಮನಬಂದಂತೆ ಗುಂಡಿನ ಸುರಿಮಳೆಗರೆದ. ಈ ಘಟನೆಯಲ್ಲಿ ಅನೇಕರು ಮೃತಪಟ್ಟಿದ್ದು, ಕ್ರಿಕೆಟ್ ಆಟಗಾರರು ಅದೃಷ್ಟವಶಾತ್ ಪಾರಾದರು.

ಈ ಘಟನೆ ಹಿನ್ನೆಲೆಯಲ್ಲಿ ಕ್ರಿಸ್ಟ್‍ಚರ್ಚ್ ಹ್ಯಾಗ್ಲೆ ಓವಲ್ ಗ್ರೌಂಡ್ಸ್‍ನಲ್ಲಿ ಶನಿವಾರ ನಡೆಯಬೇಕಿದ್ದ ನ್ಯೂಜೆಲೆಂಡ್-ಬಾಂಗ್ಲಾದೇಶ ನಡುವಣ ಮೂರನೆ ಮತ್ತು ಕೊನೆ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಇದರೊಂದಿಗೆ ಬಾಂಗ್ಲಾದ ನ್ಯೂಜಿಲೆಂಡ್ ಪ್ರವಾಸ ಮೊಟಕುಗೊಂಡಂತಾಗಿದೆ. ಶುಕ್ರವಾರದ ಪಾರ್ಥನೆ ಸಲ್ಲಿಸಲು ಬಾಂಗ್ಲಾ ಕ್ರಿಕೆಟ್ ತಂಡವು ಅಲ್‍ನೂರ್ ಮಸೀದಿಗೆ ತೆರಳಿತ್ತು. ಈ ಸಂದರ್ಭದಲ್ಲಿ ಗನ್‍ಮ್ಯಾನ್ ಯದ್ವಾತದ್ವಾ ಗುಂಡಿನ ಮಳೆಗರೆದ. ತಕ್ಷಣ ಎಚ್ಚೆತ್ತ ಆಟಗಾರರು ಹತ್ತಿರದಲ್ಲೇ ಇದ್ದ ಹ್ಯಾಗ್ಲೆ ಓವರ್ ಮೈದಾನಕ್ಕೆ ಓಡಿಹೋದರು. ಇದರಿಂದ ಅವರೆಲ್ಲರೂ ದಾಳಿಯಿಂದ ಬಚಾವಾದರು. ಈಗ ಆಟಗಾರರು ಹೋಟೆಲ್‍ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಕ್ರಿಕ್‍ಇನ್ಫೋ ವರದಿ ತಿಳಿಸಿದೆ.

ಘಟನೆ ಬಗ್ಗೆ ಕ್ರಿಕೆಟ್ ಆಟಗಾರರ ಪ್ರತಿಕ್ರಿಯೆ : ಬಾಂಗ್ಲಾದೇಶದ ಓಪನಿಂಗ್ ಬ್ಯಾಟ್ಸ್‍ಮ್ಯಾನ್ ತಮೀಮ್ ಇಕ್ಬಾಲ್ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶೂಟರ್‍ನಿಂದ ನಾವೆಲ್ಲರೂ ಪಾರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಸೀದಿ ಬಳಿ ನಡೆದ ಗುಂಡಿನ ದಾಳಿ ವೇಳ್ ಅಲ್ಲಾ ನಮ್ಮನ್ನೆಲ್ಲಾ ಪಾರು ಮಾಡಿದ್ಧಾನೆ ಎಂದು ಮತ್ತೊಬ್ಬ ಆಟಗಾರ ಮುಷ್‍ಫಿಕುರ್ ರಹೀಮ್ ತಿಳಿಸಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಕ್ತಾರ ಜಲಾಲ್ ಯೂನಸ್ ಆಟಗಾರರು ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ.

Facebook Comments