ಬೇಸಿಗೆಯಲ್ಲಿ ಮಜ್ಜಿಗೆ ಕೇವಲ ದಾಹ ತಣಿಸಲ್ಲ, ಇನ್ನೂ ಇವೆ ಅನೇಕ ಲಾಭಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ.

ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು. ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆಳವಣಿಗೆಗೆ    ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು      ಉಪಶಮನವಾಗುತ್ತದೆ.

ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ. ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ. ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ. ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ. ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

 

Facebook Comments