ಬಿಗ್ ಬ್ರೇಕಿಂಗ್ : ಎಲೆಕ್ಷನ್‌‌ಗಾಗಿ ಕಲೆಕ್ಷನ್‌ಗಿಳಿದಿದ್ದ ಎಂಜಿನಿಯರ್ ಐಟಿ ಬಲೆಗೆ, ಹೋಟೆಲ್‍ನಲ್ಲಿ 2 ಕೋಟಿ ಹಣ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15- ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸದ್ದಿಲ್ಲದೆ ಕಾರ್ಯಾಚರಣೆಗಿಳಿದ ಐಟಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್ ಒಬ್ಬರು ಎಲೆಕ್ಷನ್‍ಗಾಗಿ ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿದ್ದ 2 ಕೋಟಿ ರೂ. ಹಣವನ್ನು ಪತ್ತೆಹಚ್ಚಿದ್ದಾರೆ.

ಹಾವೇರಿಯಿಂದ ನಗರಕ್ಕೆ ಆಗಮಿಸಿ ಆನಂದರಾವ್ ವೃತ್ತ ಸಮೀಪದ ರಾಜ್‍ಮಹಲ್ ಹೋಟೆಲ್‍ನಲ್ಲಿ ತಂಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಕಾರ್ಯಪಾಲಕ ಅಭಿಯಂತರ ನಾರಾಯಣಗೌಡ ಬಿ.ಪಾಟೀಲ ಅವರ ಬಳಿ ಇದ್ದ 2 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಐಟಿ ಅಧಿಕಾರಿಗಳಿಗೆ ಹಣ ಸಿಕ್ಕ ಕೂಡಲೇ ಬಂಧನದ ಭೀತಿಯಿಂದ ಭ್ರಷ್ಟ ಅಧಿಕಾರಿ ನಾರಾಯಣಗೌಡ ತಲೆಮರೆಸಿಕೊಂಡು ಪರಾರಿಯಾಗಿದ್ದಾನೆ. ಅವರ ಸೇರಿದ ಕೆಎ25 ಪಿ2774 ಇನೋವಾ ಕಾರು ಹಾಗೂ ಚಾಲಕನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನಾರಾಯಣಗೌಡನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಹಾವೇರಿಯ ನಂದಿಲೇಔಟ್‍ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿ ಮನೆಯಲ್ಲಿದ್ದ 25 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ:   ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಐಟಿ ತಂಡ ಕೆಲವು ಇಲಾಖಾ ಅಧಿಕಾರಿಗಳ ಮೇಲೆ ಕಣ್ಣಿಟ್ಟಿದ್ದರು. ಅದರಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್,ಲೋಕೋಪಯೋಗಿ, ಇಂಧನ , ಬೃಹತ್ ನೀರಾವರಿ, ಕಂದಾಯ, ಬೃಹತ್ ಕೈಗಾರಿಕೆ ಸೇರಿದಂತೆ ಹೆಚ್ಚಿನ ಆದಾಯ ತರುವ ಇಲಾಖೆಗಳ ಅಧಿಕಾರಿಗಳ ಚಲನವಲನಗಳ ಮೇಲೆ ನಿಗಾವಹಿಸಿದ್ದರು.

ಐಟಿ ವಿಭಾಗದ ಗುಪ್ತಚರ ಅಧಿಕಾರಿಗಳು ಕೆಲವು ಇಲಾಖೆಯ ಗುತ್ತಿಗೆದಾರರು, ಮಧ್ಯವರ್ತಿಗಳ ಮೇಲೂ ಕಣ್ಣಿಟ್ಟಿದ್ದರು ಎಂದು ತಿಳಿದುಬಂದಿದೆ. ಇದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಇಇ ನಾರಾಯಣಗೌಡ ಬಿ.ಪಾಟೀಲ್ ಕಳೆದ ಹಲವು ದಿನಗಳಿಂದ ಗುತ್ತಿಗೆದಾರರ ಬಳಿ ಚುನಾವಣೆಗಾಗಿ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ.

ಸಂಗ್ರಹಿಸಿದ್ದ ಈ ಹಣವನ್ನು ಪ್ರಮುಖರೊಬ್ಬರಿಗೆ ತಲುಪಿಸುವುದಕ್ಕಾಗಿಯೇ ಹಾವೇರಿಯಿಂದ ನಿನ್ನೆ ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ರಾಜ್‍ಮಹಲ್ ಹೋಟೆಲ್‍ನಲ್ಲಿ ಎರಡು ಕೊಠಡಿಗಳನ್ನು ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು.

ಈ ಬಗ್ಗೆ ಗುಪ್ತಚರ ವಿಭಾಗದಿಂದ ಖಚಿತ ಮಾಹಿತಿ ಪಡೆದ ಐಟಿ ತಂಡ ನಾರಾಯಣಗೌಡ ಬಿ.ಪಾಟೀಲ್ ತಂಗಿದ್ದ ಹೋಟೆಲ್‍ಗೆ ಇಂದು ಸದ್ದಿಲ್ಲದೆ ದಾಳಿ ನಡೆಸಿ ಎರಡುಕೋಟಿ ನಗದು, ಲ್ಯಾಪ್‍ಟಾಪ್, ಮೊಬೈಲ್ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಒಂದು ಕೊಠಡಿಯಲ್ಲಿ ನಗದು ಸಂಗ್ರಹಿಸಿ ಇಟ್ಟಿದ್ದರೆ, ಮತ್ತೊಂದು ಕೊಠಡಿಯಲ್ಲಿ ನಾರಾಯಣಗೌಡ ಬಿ.ಪಾಟೀಲ್ ತಂಗಿದ್ದರು. ಹಣ ವಶಪಡಿಸಿಕೊಳ್ಳುತ್ತಿದ್ದಂತೆ ಇನ್ನು ತಮಗೂ ಖೆಡ್ಡಾ ತೋಡಬಹುದೆಂಬ ಭೀತಿಯಿಂದಾಗಿ ಹೋಟೆಲ್‍ನಿಂದ ಕಾಲ್ಕಿತ್ತಿದ್ದಾನೆ.

ಇನ್ನು ಕಾರು ಚಾಲಕನನ್ನು ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿರುವ ನಡುವೆಯೇ ಹಾವೇರಿಯಲ್ಲೂ ದಾಳಿ ನಡೆಸಿ 25 ಲಕ್ಷ ನಗದು, ಪತ್ತೆ ಮಾಡಿರುವುದರಿಂದ ಈತನನ್ನು ಇನ್ನಷ್ಟು ಜಾಲಾಡಲು ಐಟಿ ಮುಂದಾಗಿದೆ.

ಇನ್ನು ಹಲವರ ಮೇಲೂ ಕಣ್ಣು:  ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಭಾರೀ ಪ್ರಮಾಣದ ಹಣ ಹಂಚಿಕೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಐಟಿ ತಂಡ ಇನ್ನು ಕೆಲವು ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಆಗಮಿಸಿರುವ ತನಿಖಾ ತಂಡ ಸದ್ದಿಲ್ಲದೆ ಕೆಲವರ ಚಲನವಲನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಅದರಲ್ಲೂ ಗುತ್ತಿಗೆದಾರರ ಮೇಲಂತೂ ಐಟಿ ತನ್ನ ದೃಷ್ಟಿ ನೆಟ್ಟಿದೆ.

[ # ಎಚ್ಚರಿಕೆ : ‘ಈ ಸಂಜೆ’ ಸುದ್ದಿಗಳನ್ನು ನಕಲಿಸುವವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗುವುದು ]

Facebook Comments

Sri Raghav

Admin