ಸುಮಲತಾಗೆ ಸಿಕ್ತು ‘ಕೃಷ್ಣಾ’ಶೀರ್ವಾದ..! ಕುತೂಹಲ ಕೆರಳಿಸಿದೆ ಮಂಡ್ಯ ಕುರುಕ್ಷೇತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15-ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಇಂದು ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಆಗಮಿಸಿದ ಸುಮಲತಾ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ತಮಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ.

ಮಂಡ್ಯದಲ್ಲಿ ತಮ್ಮ ಪರ ಪ್ರಚಾರ ನಡೆಸಬೇಕೆಂದು ಮನವಿ ಮಾಡಿಕೊಂಡ ಸುಮಲತಾ, ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರಿಗೂ ನನ್ನ ಪರ ಪ್ರಚಾರ ನಡೆಸುವಂತೆ ಸೂಚಿಸಬೇಕೆಂದು ಕೋರಿಕೊಂಡಿದ್ದಾರೆ.

ಸುಮಲತಾ ಅವರ ಮನವಿಗೆ ಸ್ಪಂದಿಸಿರುವ ಎಸ್.ಎಂ.ಕೃಷ್ಣ, ನಾನು ಬಿಜೆಪಿ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಪ್ರಚಾರ ನಡೆಸಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ನನ್ನದೇ ಆದ ಕಿರು ಸೇವೆಯನ್ನು ಸಲ್ಲಿಸಬೇಕೆಂದು ತೀರ್ಮಾನಿಸಿದ್ದೇನೆ.

ಅಗತ್ಯ ಕಂಡುಬಂದರೆ ಮಂಡ್ಯ ಜಿಲ್ಲೆಗೂ ಬಂದು ನಿಮ್ಮ ಪರವಾಗಿ ಪ್ರಚಾರ ಮಾಡುತ್ತೇನೆ. ನನ್ನ ಬೆಂಬಲಿಗರಿಗೂ ಸುಮಲತಾ ಪರ ನಿಲ್ಲುವಂತೆ ಮನವಿ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.

ನನ್ನ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ಸಿಗುತ್ತದೆ. ಆದರೆ ನನಗೆ ಅಂಬರೀಶ್ ಅಭಿಮಾನಿಗಳೇ ಶ್ರೀರಕ್ಷೆ.

ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಎಲ್ಲವನ್ನು ತಿಳಿದೇ ನಾನು ಧುಮುಕಿದ್ದೇನೆ. ನಿಮ್ಮಂಥ ಹಿರಿಯರ ಮಾರ್ಗದರ್ಶನ ನನಗೆ ಅಗತ್ಯ ಎಂದು ಸುಮಲತಾ ಎಸ್‍ಎಂಕೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನೀವು ಎಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದೀರಿ ಎಂಬುದು ನನಗೆ ಗೊತ್ತು. ಇಡೀ ಜಿಲ್ಲೆ ಜೆಡಿಎಸ್‍ಮಯವಾಗಿರುವುರಿಂದ ಗೆಲ್ಲಲು ಸಾಕಷ್ಟು ಶ್ರಮವಹಿಸಬೇಕು. ಅಂಬರೀಶ್ ಅಭಿಮಾನಿಗಳು, ಹಿತೈಷಿಗಳು ಮನಸ್ಸು ಮಾಡಿದರೆ ಫಲಿತಾಂಶ ಏನು ಬೇಕಾದರೂ ಆಗಬಹುದು.

ನಿಮಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‍ನಿಂದ ಮಂಡ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸುಮಲತಾ ಅವರ ಲೆಕ್ಕಾಚಾರವಾಗಿತ್ತು. ಆದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಸಕ್ಕರೆ ಜಿಲ್ಲೆಯನ್ನು ತೆನೆಹೊತ್ತ ಮಹಿಳೆಗೆ ಬಿಟ್ಟುಕೊಡಲಾಗಿದೆ.

[ # ಎಚ್ಚರಿಕೆ : ‘ಈ ಸಂಜೆ’ ಸುದ್ದಿಗಳನ್ನು ನಕಲಿಸುವವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗುವುದು ]

Facebook Comments

Sri Raghav

Admin