BIG STORY : ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸಿ ವಿಶ್ವದೆದುರು ನಗೆಪಾಟಲಿಗೀಡಾದ ಚೀನಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.15- ಭಾರತದ ಜೊತೆಗೆ ಸ್ನೇಹಹಸ್ತ ಚಾಚುತ್ತಲೇ ಬೆನ್ನಿಗೆ ಚೂರಿ ಹಾಕುವ ಚೀನಾ ವಿಶ್ವದ ಮುಂದೆ ಮತ್ತೆ ತನ್ನ ನರಿಬುದ್ದಿಯನ್ನು ತೋರಿಸುವ ಮೂಲಕ ನಗೆಪಾಟಲಿಗೆ ಗುರಿಯಾಗಿದೆ.

ಪಾಕಿಸ್ತಾನದ ಜೈಷ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ಮೌಲಾನ ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ರಾಷ್ಟ್ರಗಳ ಪ್ರಸ್ತಾವನೆಗೆ ಚೀನಾ ವಿರೋಧ ವ್ಯಕ್ತಪಡಿಸಿದೆ.

ಒಂದು ವೇಳೆ ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೆ ಪಾಕಿಸ್ತಾನ ಆತನನ್ನು ಬಂಧಿಸಿ ಭಾರತಕ್ಕೆ ಒಪ್ಪಿಸಲೇಬೇಕಿತ್ತು. ಇದರಿಂದ ವಿಶ್ವಮಟ್ಟದಲ್ಲಿ ಭಾರತದ ರಾಜ ತಾಂತ್ರಿಕ ಗೆಲುವಿಗೆ ಬಹುದೊಡ್ಡ ಯಶಸ್ಸು ಸಿಕ್ಕಂತಾಗುತ್ತಿತ್ತು.

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಭಾರತ ಮಾಡಿದ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾಸೇರಿದಂತೆ ಇತರೆ ರಾಷ್ಟ್ರಗಳು ಕೂಡ ಬೆಂಬಲ ಸೂಚಿಸಿದ್ದವು.

ಆದರೆ ಚೀನಾ ತನ್ನ ಹಿತಾಸಕ್ತಿಗೋಸ್ಕರ ಇದಕ್ಕೆ ಅಡ್ಡಿಪಡಿಸುವ ಮೂಲಕ ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮುಂದುವರೆಸಿದೆ. ಈ ಹಿಂದೆಯೂ ವಿಶ್ವಸಂಸ್ಥೆಯಲ್ಲಿ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವ ಪ್ರಸ್ತಾವಕ್ಕೆ ಚೀನಾ ಅಡ್ಡಗಾಲಾಗಿತ್ತು.

ಇದು ನಾಲ್ಕನೇ ಬಾರಿ ಭಾರತಕ್ಕೆ ಕೊಕ್ಕೆ ಹಾಕಿದಂತಾಗಿದೆ. ಚೀನಾದ ಈ ಕ್ರಮಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಖುದ್ದು ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಕೆಂಡ ಕಾರಿದ್ದು, ಭಯೋತ್ಪಾದನೆ ಹೋರಾಟದಲ್ಲಿ ನಿಮ್ಮ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸುವಂತೆ ನೇರ ಮಾತುಗಳಲ್ಲೇ ಎಚ್ಚರಿಸಿದೆ.

ಇನ್ನು ಖಾಯಂ ಸದಸ್ಯ ರಾಷ್ಟ್ರಗಳು ಕೂಡ ಚೀನಾದ ಈ ನರಿ ಬುದ್ದಿಯನ್ನು ಖಂಡಾತುಂಡವಾಗಿ ಖಂಡಿಸಿವೆ. ಭಯೋತ್ಪಾದನೆ ವಿಷಯದಲ್ಲಿ ನೀವು ಹೋರಾಟ ಮಾಡುವುದಾದರೆ ಮೌಲಾನ ಮಸೂದ್ ಅಜರ್‍ನನ್ನು ಭಯೋತ್ಪಾದಕ ಎಂದು ಘೋಷಣೆ ಮಾಡುವ ತೀರ್ಮಾನಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ.

ಭಾರತದಲ್ಲಿ ನಡೆದಿರುವ ಅನೇಕ ದಾಳಿಗಳ ಹಿಂದೆ ಈತನ ಕೈವಾಡ ಇರುವುದನ್ನು ಸಾಕ್ಷಿಗಳ ಸಮೇತ ಸಾಬೀತು ಮಾಡಲಾಗಿದೆ. ಆದರೂ ನೀಡಿರುವ ಸಾಕ್ಷಿಗಳು ತೃಪ್ತಿಕರವಲ್ಲ ಎಂದು ಹೇಳುತ್ತಿರುವುದು ನೀವು ಪಾಕಿಸ್ತಾನವನ್ನು ಓಲೈಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವನ್ನು ಮುಂದುವರಿಸಿದರೆ ಬಲವಂತವಾಗಿ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಅಮೆರಿಕದ ರಾಯಭಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್ ನೇತ್ರತ್ವದ ಜೈಷ್- ಎ- ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಇದು ತನ್ನ ಕೃತ್ಯ ಎಂದು ಹೊಣೆ ಹೊತ್ತುಕೊಂಡಿತ್ತು.

ಪರಿಣಾಮ ಭಾರತದ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಫೆ.27 ರಂದು ಪ್ರಸ್ತಾವನೆ ರವಾನಿಸಿದ್ದವು. ಆದರೆ ತಾಂತ್ರಿಕ ಕಾರಣ ನೀಡಿ ಚೀನಾ ಈ ಪ್ರಸ್ತಾವನೆಗೆ ತಡೆ ನೀಡಿದೆ.

ಜೈಷ್ ಇ ಮೊಹಮ್ಮದ್ ಸಂಘಟನೆ ತನ್ನದೇ ಕೃತ್ಯ ಎಂದು ಒಪ್ಪಿಕೊಂಡ ಬಳಿಕವೂ ಕೂಡ ಚೀನಾ ಅಜರ್‍ಗೆ ಬೆಂಬಲ ನೀಡಿರುವುದರ ವಿರುದ್ಧ ಭದ್ರತಾ ಮಂಡಳಿ ಸದಸ್ಯರು ಟೀಕೆ ಮಾಡಿದ್ದಾರೆ. ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದರೆ ಆತನ ಆಸ್ತಿ, ಪ್ರಯಾಣದ ಮೇಲೆ ನಿರ್ಬಂಧ ಬೀಳಲಿದೆ. ಆತನ ಇಡೀ ಆಸ್ತಿ ಸರ್ಕಾರ ಪಾಲಾಗುತ್ತದೆ.

ಬೇರೆ ಯಾವ ರಾಷ್ಟ್ರಗಳು ಕೂಡ ಆತನಿಗೆ ಹಣ ಸಹಾಯ ನೀಡಲು ಸಾಧ್ಯವಿಲ್ಲ. ಪುಲ್ವಾಮಾ ದಾಳಿಯ ಹೊಣೆಯನ್ನು ಜೈಷ್ ಹೊತ್ತುಕೊಂಡಿತ್ತು. ಇದಾದ ನಂತರ ಫೆ.27ರಂದು ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ವಿಶ್ವಸಂಸ್ಥೆಯ ಬಳಿ ಮಸೂದ್ ಅಜರ್‍ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದವು. ಆದರೆ ಈ ನಿರ್ಧಾರಕ್ಕೆ ಚೀನಾ ಬೆಂಬಲ ಸೂಚಿಸಿಲ್ಲ.

ಈ ಮೂಲಕ ಕಳೆದ 10 ವರ್ಷಗಳ ಅವಧಿಯಲ್ಲಿ ಮಸೂದ್‍ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿ ಚೀನಾ ಅಡ್ಡಗಾಲು ಹಾಕಿದಂತಾಗಿದೆ. ಮಸೂದ್‍ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರ್ಪಡೆ ಮಾಡಿದರೆ ಆತನಿಗೆ ಒಂದು ದೇಶದಿಂದ ಒಂದು ದೇಶಕ್ಕೆ ಪ್ರಯಾಣ ಬೆಳೆಸಲು ನಿರ್ಬಂಧ ಬೀಳುತ್ತದೆ.

ಇದಲ್ಲದೆ, ಸಾಕಷ್ಟು ನಿರ್ಬಂಧ ಆತನ ಮೇಲೆ ಹೇರಲಾಗುತ್ತದೆ. ಈ ಅವಕಾಶಕ್ಕೆ ಚೀನಾ ತಡೆ ನೀಡಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಮಸೂದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಮಸೂದ್‍ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಭಾರತ ಹೇಳಿದೆ.

ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿರುವುದಕ್ಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿ ಎಂದು ಟ್ವಿಟರ್‍ನಲ್ಲಿ ಅಭಿಯಾನ ಆರಂಭಗೊಂಡಿದೆ. ಇತ್ತೀಚೆಗೆ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ 40 ಯೋಧರು ಹುತಾತ್ಮರಾಗಿದ್ದರು. ಇದರಿಂದ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.

[ # ಎಚ್ಚರಿಕೆ : ‘ಈ ಸಂಜೆ’ ಸುದ್ದಿಗಳನ್ನು ನಕಲಿಸುವವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗುವುದು ]

Facebook Comments

Sri Raghav

Admin