ಮ್ಯಾನ್ಮಾರ್ ಗಡಿಯಲ್ಲಿ 3ನೇ ಸರ್ಜಿಕಲ್ ಸ್ಟ್ರೈಕ್, 12 ಉಗ್ರರು ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.16- ಪಾಕಿಸ್ತಾನ್ ಕೃಪಾಪೋಷಿತ ಭಯೋತ್ಪಾದಕರ ಉಪಟಳದ ಹಿಂದೆಯೇ ಮ್ಯಾನ್ಮಾರ್ ಗಡಿಯಲ್ಲಿ ತಲೆ ಎತ್ತಿದ್ದ ಚೀನಾ ಬೆಂಬಲಿತ ಉಗ್ರರನ್ನೂ ಮಟ್ಟ ಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಭಾರತೀಯ ವಾಯುಸೇನೆ ಪಾಕ್‍ನಲ್ಲಿ ಉಗ್ರ ಕ್ಯಾಂಪ್‍ಗಳ ಮೇಲೆ ನಡೆಸಿದ್ದ ಏರ್‍ಸ್ಟ್ರೈಕ್‍ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿರುವಾಗಲೇ ಭಾರತೀಯ ಸೇನೆ ಮ್ಯಾನ್ಮಾರ್ ಗಡಿಯಲ್ಲಿ ಮೆಗಾ ಸರ್ಜಿಕಲ್ ಸ್ಟ್ರೈಕ್ ನಡೆಸಿ 12ಕ್ಕೂ ಹೆಚ್ಚು ಉಗ್ರರನ್ನು ಕೊಂದು ಶಿಬಿರಗಳನ್ನು ಧ್ವಂಸ ಮಾಡಿದೆ.

ಈ ಮೂಲಕ ಭಾರತದ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್‍ನನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತ ಮತ್ತು ಮ್ಯಾನ್ಮಾರ್ ಸೇನೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಿಜೋರಾಂ ಗಡಿ ಪ್ರದೇಶದಲ್ಲಿ ಚೀನಾ ಬೆಂಬಲಿತ ಉಗ್ರರನ್ನು ಮಟ್ಟಹಾಕಿ ಅವರ ನೆಲೆಗಳನ್ನು ಧ್ವಂಸಗೊಳಿಸಿದೆ.

ಫೆ.17 ರಿಂದ ಮಾರ್ಚ್ 2ರ ಅವಧಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಮ್ಯಾನ್ಮಾರ್‍ನಲ್ಲಿ ತಲೆ ಎತ್ತಿದ್ದ ಅರಾಕನ್ ಆರ್ಮಿ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಅರಾಕನ್ ಆರ್ಮಿಗೆ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ(ಕೆಐಎ) ಬೆಂಬಲ ನೀಡಿತ್ತು. ಈ ಎರಡು ಉಗ್ರ ಸಂಘಟನೆಗಳು ಮ್ಯಾನ್ಮರ್‍ನಲ್ಲಿ ವಿಧ್ವಸಂಕ ಕೃತ್ಯಗಳನ್ನು ನಡೆಸುತ್ತಿದ್ದವು.

ಭಾರತ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸಂಚು ರೂಪಿಸಿದ್ದರು.

ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು. ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಬಳಿಕ ನಾಗಾ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಆಪರೇಷನ್ ಮಾರ್ಚ್ 2ರಂದು ಅಂತ್ಯವಾಗಿದೆ.

ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ

ಚೀನಿ ಉಗ್ರರ ಟಾರ್ಗೆಟ್ :  ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿರುವ ಜಂಟಿ ಸೇನಾ ಕಾರ್ಯಾಚರಣೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕ್ ಮೂಲದ ಉಗ್ರರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಸೇನೆ ಇದೀಗ ಚೀನಾ ಮೂಲದ ಭಯೋತ್ಪಾದಕರನ್ನು ಗುರಿಯಾಗಿಟ್ಟುಕೊಂಡು ಮಯನ್ಮಾರ್ ಗಡಿಯಲ್ಲಿ ದಾಳಿ ನಡೆಸಿದೆ ಎನ್ನಲಾಗಿದೆ.

ಸೇನೆಯ ಮುಖ್ಯ ಗುರಿ ಅರಾಕನ್ ಆರ್ಮಿ ಆಗಿದ್ದು, ಈ ಉಗ್ರ ಸಂಘಟನೆಗೆ ಚೀನಾ ಮೂಲದ ಕಚಿನ್ ಇಂಡಿಪೆಂಡೆಂಟ್ ಆರ್ಮಿ (ಕೆಐಎ) ನೇರ ಬೆಂಬಲ ನೀಡಿತ್ತು. ಈ ಕೆಐಎ ಉಗ್ರ ಸಂಘಟನೆಗೆ ಚೀನಾ ಸೇನೆಯ ಸಹಕಾರ ಕೂಡ ಇದೆ. ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಮ್ಯಾನ್ಮಾರ್ ಗಡಿಯಲ್ಲಿ ಭಾರತ ನಿರ್ಮಿಸುತ್ತಿರುವ ಬಹು ಉದ್ದೇಶಿತ ಅಭಿವೃದ್ಧಿ ಯೋಜನೆಗೆ ಅಡ್ಡಿ ಪಡಿಸಲೆಂದೇ ಈ ಕೆಐಎ ಉಗ್ರ ಸಂಘಟನೆ ಅರಾಕನ್ ಆರ್ಮಿಗೆ ಬೆಂಬಲವಾಗಿ ನಿಂತಿತ್ತು ಎನ್ನಲಾಗಿದೆ.

Facebook Comments