ವಾಟರ್ ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಲು ಮುಂದಾದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಬೇಸಿಗೆಯ ಆರಂಭದಲ್ಲೇ ಬೆಂಗಳೂರು ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಹಾಹಾಕಾರ ಎದುರಿಸಲು ಬಿಬಿಎಂಪಿ ಒಂದೆಡೆ ಸಜ್ಜಾಗಿದ್ದರೆ, ನೀರಿನ ಅಭಾವವನ್ನು ದುರುಪಯೋಗಪಡಿಸಿಕೊಳ್ಳಲು ಖಾಸಗಿ ವಾಟರ್ ಟ್ಯಾಂಕರ್ಸ್ ಮಾಫಿಯಾಗಳು ತಲೆ ಎತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.

ಇಂದು ಜಲಮಂಡಳಿ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಖಾಸಗಿ ವಾಟರ್‍ಟ್ಯಾಂಕರ್ಸ್‍ಗಳು ನೀರು ಸರಬರಾಜು ಮಾಡಲು ನಿಗದಿತ ದರವನ್ನು ಒಂದೆರಡು ದಿನಗಳಲ್ಲಿ ನಿಗದಿ ಮಾಡಲಾಗುವುದು. ಮನಬಂದಂತೆ ದರ ನಿಗದಿ ಮಾಡಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಟರ್‍ಟ್ಯಾಂಕರ್‍ನವರು ಜಲಮೂಲದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಜಲಮಂಡಳಿಗೆ, ಸಾರ್ವಜನಿಕರಿಗೆ ನೀಡಬೇಕಾಗುತ್ತದೆ. ನಿಗದಿ ಮಾಡಿರುವ ದರವನ್ನು ಸಾರ್ವಜನಿಕರಿಂದ ವಸೂಲಿ ಮಾಡಬೇಕು. ಶೀಘ್ರದಲ್ಲೇ ಖಾಸಗಿ ಟ್ಯಾಂಕರ್‍ಗಳ ಹಾವಳಿ ತಪ್ಪಿಸಲು ಶೀಘ್ರ ನಿಯಮಗಳನ್ನು ರೂಪಿಸಲಾಗುವುದು. ನೀರಿನ ಗುಣಮಟ್ಟದ ಬಗ್ಗೆಯೂ ಪಾಲಿಕೆಗೆ ಮಾಹಿತಿ ನೀಡಬೇಕು ಎಂದರು.

ನೀರು ಮಾರಾಟ ಮಾಡುವವರು ಕಡ್ಡಾಯವಾಗಿ ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕು. ಟ್ರೇಡ್ ಲೈಸೆನ್ಸ್ ಇಲ್ಲದೆ ನೀರು ಮಾರಾಟ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ನಿರುಪಯುಕ್ತವಾಗಿರುವ ಬೋರ್‍ವೆಲ್‍ಗಳನ್ನು ರೀ ಡ್ರಿಲ್ ಮಾಡಲು ಚಿಂತನೆ ನಡೆಸಲಾಗಿದೆ.

ನೀತಿ-ಸಂಹಿತೆ ಇದ್ದರೂ ಕೂಡ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸಲು ಯಾವುದೇ ಅಡ್ಡಿ ಇಲ್ಲ ಎಂದು ಅವರು ಹೇಳಿದರು. 110 ಹಳ್ಳಿಗಳ ಪೈಕಿ 29 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

1286 ಬೋರ್‍ವೆಲ್‍ಗಳು 110 ಹಳ್ಳಿಗಳಲ್ಲಿವೆ. 267 ಟ್ಯಾಂಕರ್‍ಗಳ ಮೂಲಕ 110 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅವಶ್ಯಕತೆಯಿದ್ದ ಕಡೆಗಳಲ್ಲಿ ಇನ್ನಷ್ಟು ಟ್ಯಾಂಕರ್‍ಗಳನ್ನು ಖರೀದಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕುಡಿಯುವ ನೀರಿನ ಸರಬರಾಜಿಗೆ ವಾರ್ಡ್‍ವಾರು ಪ್ರತ್ಯೇಕ ಹಣ ಮೀಸಲಿರಿಸಲಾಗಿದೆ. ಇದಕ್ಕಾಗಿ ಈಗಾಗಲೇ 50 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ ಎಂದು ಹೇಳಿದರು.

Facebook Comments