28 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾದ ಬಿಎಸ್‍ಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಜಾತ್ಯಾತೀತ ಪಕ್ಷಗಳ ಹೊಂದಾಣಿಕೆಯ ಮಾತುಗಳು ಕೇಳು ಬರುತ್ತಿರುವ ಸಂದರ್ಭದಲ್ಲೇ ಬಿಎಸ್‍ಪಿ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್‍ಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ 28 ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿಂದು ನಡೆದ ಬಿಎಸ್‍ಪಿ ರಾಜ್ಯ ಘಟಕದ ಸಭೆಯಲ್ಲಿ ಮಾತನಾಡಿರುವ ಬಿಎಸ್‍ಪಿ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಘಟಕದ ಉಸ್ತುವಾರಿ ನಾಯಕ ಅಶೋಕ್ ಸಿದ್ದಾರ್ಥ, ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

28 ಕ್ಷೇತ್ರಗಳಿಗೂ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ಬಿಎಸ್‍ಪಿ ದೇಶದಲ್ಲೇ ಮೂರನೇ ಅತಿದೊಡ್ಡ ಪಕ್ಷ. ನಮಗೆ ನಮ್ಮದೇ ಆದ ಮತಬ್ಯಾಂಕ್ ಇದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಮುಸ್ಲಿಂರು ಹೊಂದಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಹೊಂದಾಗಬೇಕು. ಬಿಎಸ್‍ಪಿ ಮುಸ್ಲಿಂರಿಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ ಪತ್ನಿ ಕಲಾವತಿಯನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿಲ್ಲ.

ಆಕೆಗಿನ್ನೂ 25 ವರ್ಷ ತುಂಬಿಲ್ಲ. ಹಾಗಾಗಿ ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಶೀಘ್ರವೇ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರಲ್ಲದೆ, ಪಕ್ಷದ ವರಿಷ್ಠೆ ಮಾಯಾವತಿ ಅವರು ಏ.10ಕ್ಕೆ ಮೈಸೂರಿಗೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಬಿಎಸ್‍ಪಿ ರಾಜ್ಯಾಧ್ಯಕ್ಷ ಪ್ರೊ. ಹರಿರಾಮ್, ರಾಜ್ಯ ಉಸ್ತುವಾರಿ ಎಂ.ಎಲ್.ತೋಮರ್, ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದ ಶರಿಯರ್‍ಖಾನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Facebook Comments