ಬಿಗ್ ಬ್ರೇಕಿಂಗ್: ಜೆಡಿಎಸ್‌ಗೆ ಶಾಕ್, ಡ್ಯಾನೀಶ್ ಅಲಿ ಬಿಎಸ್‌ಪಿ ತೆಕ್ಕೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16-ರಾಜ್ಯದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸದಸ್ಯರಾಗಿದ್ದ ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಷ್ ಆಲಿ ಇಂದು ಬಿಎಸ್‍ಪಿ ಸೇರ್ಪಡೆಯಾಗಿದ್ದಾರೆ.ಲಕ್ನೋದ ಬಿಎಸ್‍ಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿರುವ ಡ್ಯಾನಿಷ್ ಆಲಿ , ಜೆಡಿಎಸ್ ಉತ್ತರ ಪ್ರದೇಶದಲ್ಲಿ ದೊಡ್ಡಮಟ್ಟದ ಸಂಘಟನೆ ಹೊಂದಿಲ್ಲ. ಹೀಗಾಗಿ ನನ್ನ ದೊಡ್ಡ ಮಟ್ಟದ ಪರಿಶ್ರಮವೆಲ್ಲ ನನ್ನ ಜನ್ಮ ಭೂಮಿಯಲ್ಲಿ ಯಾವುದೇ ಫಲ ನೀಡಲಿಲ್ಲ.

ನನ್ನ ಕರ್ಮಭೂಮಿಯಲ್ಲಿ ನಾನು ರಾಜಕೀಯ ನೆಲೆ ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಲಿದ್ದು, ಅದನ್ನು ಎದುರಿಸಲು ಬಲವಾದ ನಾಯಕತ್ವದ ಅಗತ್ಯವಿದೆ. ನಾವೂ ಕೂಡ ಪ್ರಬಲವಾಗಿ ಬೆಳೆಯಬೇಕಿದೆ. ಹೀಗಾಗಿ ನಾವು ಬಿಎಸ್‍ಪಿ ಸೇರುತ್ತಿರುವುದಾಗಿ ಡ್ಯಾನಿಷ್ ಅಲಿ ಘೋಷಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ಸಮನ್ವಯ ಸಮಿತಿಗೆ ಜೆಡಿಎಸ್‍ನಿಂದ ಡ್ಯಾನಿಷ್ ಆಲಿ ಸದಸ್ಯರಾಗಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್‍ನಿಂದ ಡ್ಯಾನಿಷ್ ಆಲಿ ಸದಸ್ಯರಾಗಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಮಾಪ್ತರಾಗಿದ್ದ ಡ್ಯಾನಿಷ್ ಆಲಿ, ರಾಷ್ಟ್ರ ರಾಜಕಾರಣದ ಚಟುವಟಿಕೆಗಳ ನಿರ್ವಹಣೆ ಜವಾಬ್ದಾರಿಯನ್ನು ಡ್ಯಾನಿಷ್ ಆಲಿ ಅವರ ಹೆಗಲಿಗೆ ಹೊರಿಸಿದ್ದರು.

ಇತ್ತೀಚೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಸಂಬಂಧದಲ್ಲಿ ಕ್ಷೇತ್ರ ಹಂಚಿಕೆ ಸಂಬಂಧಪಟ್ಟಂತೆ ನಡೆದ ಮಾತುಕತೆಯಲ್ಲಿ ಡ್ಯಾನಿಷ್ ಆಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದೆರಡು ದಿನಗಳ ಹಿಂದೆ ರಾಹುಲ್‍ಗಾಂಧಿಯವರೊಂದಿಗೆ ಅಂತಿಮ ಸುತ್ತಿನ ಮಾತುಕತೆ ಜವಾಬ್ದಾರಿಯನ್ನು ದೇವೇಗೌಡರು ಡ್ಯಾನಿಷ್ ಆಲಿ ಅವರಿಗೆ ವಹಿಸಿದ್ದರು.

ಅಂದು ರಾಹುಲ್‍ಗಾಂಧಿಯವರು ದೆಹಲಿಯಿಂದ ನೇರವಾಗಿ ತಮಿಳುನಾಡಿಗೆ ತೆರಳಿದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಅಷ್ಟಕ್ಕೇ ಸುಮ್ಮನಾಗದ ಡ್ಯಾನಿಷ್ ಆಲಿ ದೆಹಲಿಯಿಂದ ಕೊಚ್ಚಿನ್‍ಗೆ ಬಂದು ಅಲ್ಲಿ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆಯ ಕರಾರಿಗೆ ಸಹಿ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಎರಡು ದಿನಗಳಲ್ಲೇ ಪರಿಸ್ಥಿತಿ ಉಲ್ಟಾ ಹೊಡೆದಿದ್ದು, ಇಂದು ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಡ್ಯಾನಿಷ್ ಆಲಿ, ದೇವೇಗೌಡರ ಆಶೀರ್ವಾದ ಪಡೆದೇ ಬಿಎಸ್‍ಪಿ ಸೇರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆದರೆ ಜೆಡಿಎಸ್ ವಲಯದಿಂದ ಬೇರೆ ರೀತಿಯ ವ್ಯಾಖ್ಯಾನ ಕೇಳಿಬರುತ್ತಿದ್ದು, ಉತ್ತರ ಪ್ರದೇಶದಲ್ಲಿ ಡ್ಯಾನಿಷ್ ಆಲಿ ಅವರಿಗಾಗಿ ಒಂದು ಸೀಟು ಬಿಟ್ಟುಕೊಡುವಂತೆ ಮನವಿ ಮಾಡಲಾಗಿತ್ತು. ಮಾಯಾವತಿ ಅವರು ಅದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಅವರು ಬಿಎಸ್‍ಪಿ ಜೊತೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮೂಲಕ ರಾಜ್ಯ ಸಮನ್ವಯ ಸಮಿತಿಗೆ ಜೆಡಿಎಸ್‍ನಿಂದ ಸಂಚಾಲಕರಿಲ್ಲದಂತಾಗಿದೆ. ರಾಷ್ಟ್ರಮಟ್ಟದಲ್ಲಿ ಜೆಡಿಎಸ್ ಪರವಾಗಿ ಪಕ್ಷ ಚಟುವಟಿಕೆ ನಡೆಸುತ್ತಿದ್ದ ಪ್ರಮುಖ ನಾಯಕನ ಕೊರತೆಯೂ ಎದುರಾಗಿದೆ.

Facebook Comments