ಅಭ್ಯರ್ಥಿ ಆಯ್ಕೆ ಕಸರತ್ತು, ನಾಳೆ ಬಿಜೆಪಿ ಮಹತ್ವದ ಕೋರ್ ಕಮಿಟಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.16- ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ನಾಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಭೆಗೆ ಕೋರ್ ಕಮಿಟಿ ಸದಸ್ಯರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸಂತೋಷ್, ನಳೀನ್‍ಕುಮಾರ್ ಕಟೀಲ್, ಆರ್.ಅಶೋಕ್, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಿದೆ.
ಸೋಮವಾರ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಮತ್ತಿತರ ಪ್ರಮುಖರನ್ನು ಭೇಟಿಯಾಗಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ.

ಹಾಲಿ 15 ಸಂಸದರಿಗೆ ಬಹುತೇಕ ಟಿಕೆಟ್ ಖಾತರಿಯಾಗಿದೆ. ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ನಿಧನದಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.ಉಳಿದ 12 ಕ್ಷೇತ್ರಗಳ ಪೈಕಿ ಚಾಮರಾಜನಗರದಿಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಹಾಸನದಿಂದ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಬಂದರೆ ಬಹುತೇಕ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಆದರೆ ಉಳಿದ 9 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ತುಮಕೂರಿನಿಂದ ಮಾಜಿ ಸಚಿವ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್‍ಗೌಡ ಆಕಾಂಕ್ಷಿಗಳಾಗಿದ್ದಾರೆ. ಚಿತ್ರದುರ್ಗದಿಂದ ಮಾಜಿ ಸಂಸದ ಜನಾರ್ಧನ ಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಎ.ನಾರಾಯಣಸ್ವಾಮಿ ನಡುವೆ ಸ್ಪರ್ಧೆ ಇದೆ.

ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಬಿ.ಎನ್.ಬಚ್ಚೇಗೌಡ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದರಿಂದ ಇಲ್ಲಿ ಯಾವುದೇ ಬಿಕ್ಕಟ್ಟು ಎದುರಾಗಿಲ್ಲ.
ಕೋಲಾರದಲ್ಲಿ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ತಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಇದೇ 18ರಂದು ಸುಮಲತಾ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿರುವುದರಿಂದ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಒಂದು ವೇಳೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ.ಬಳ್ಳಾರಿಯಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದೇ ಈವರೆಗೂ ದೃಢಪಟ್ಟಿಲ್ಲ. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ , ಮಾಜಿ ಸಚಿವ ಸಣ್ಣ ಫಕೀರಪ್ಪ , ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತಾ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿವೆ.

ರಾಯಚೂರಿನಿಂದ ಮಾಜಿ ಶಾಸಕ ಬಸವರಾಜ್ ಹವಾಲ್ದಾರ್, ಶಾಸಕ ಶಿವನಗೌಡ ನಾಯಕ್ ಆಕಾಂಕ್ಷಿಗಳಾಗಿದ್ದಾರೆ. ಗುಲ್ಬರ್ಗದಿಂದ ಈಗಾಗಲೇ ಉಮೇಶ್ ಜಾಧವ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ.ಇನ್ನು ಚಿಕ್ಕೋಡಿಯಿಂದ ಮಾಜಿ ಸಂಸದ ರಮೇಶ್ ಕತ್ತಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಚಿವ ಲಕ್ಷ್ಮಣ ಸವದಿ ಆಕಾಂಕ್ಷಿಗಳಾಗಿದ್ದಾರೆ.

ಹೀಗೆ ಎಲ್ಲೆಲ್ಲಿ ಅಭ್ಯರ್ಥಿಗಳ ಬಿಕ್ಕಟ್ಟುಎದುರಾಗಿದೆಯೋ ಅಂತಹ ಕಡೆ ಎಲ್ಲರ ಮನವೊಲಿಸಿ ಸರ್ವಸಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಈ ಎಲ್ಲ ಸಾಧಕ-ಬಾಧಕಗಳ ಬಗ್ಗೆಯೇ ನಾಳಿನ ಕೋರ್‍ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿವೆ.

Facebook Comments