ರಮೇಶ್ ಜಾರಕಿಹೊಳಿ, ನಾಗೇಂದ್ರ ನಿಗೂಢವಾಗಿ ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ನಾಯಕರು ಬಿಡುವಿಲ್ಲದಂತಹ ರಾಜಕಾರಣ ಮಾಡುತ್ತಿದ್ದರೆ, ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್‍ಜಾರಕಿಹೊಳಿ ಮತ್ತು ನಾಗೇಂದ್ರ ಯಾರ ಕಣ್ಣಿಗೂ ಬೀಳದೆ ನಿಗೂಢವಾಗಿ ಉಳಿದಿದ್ದಾರೆ.

ಸಂಪುಟ ಪುನರ್ ರಚನೆಯಲ್ಲಿ ತಮ್ಮನ್ನು ಕೈ ಬಿಟ್ಟಿದ್ದರಿಂದ ಸಿಟ್ಟಾಗಿರುವ ಶಾಸಕ ರಮೇಶ್‍ಜಾರಕಿಹೊಳಿ ತಮ್ಮದೇ ಆದ ಗುಂಪುಕಟ್ಟಿಕೊಂಡು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸಿದ್ದರು. ಅದಕ್ಕಾಗಿ ಒಂದು ತಿಂಗಳುಗಳ ಕಾಲ ತಮ್ಮ ಬೆಂಬಲಿಗ ಶಾಸಕರ ಜತೆ ಮುಂಬೈನಲ್ಲಿ ತಂಗಿದ್ದರು.

ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗದೆ ವಿಪ್ ಉಲ್ಲಂಘಿಸಿದ್ದಕ್ಕೆ ಈ ಕಾರಣಕ್ಕಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಮೇಶ್‍ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕಮಟಳ್ಳಿ, ಉಮೇಶ್‍ಜಾಧವ್ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ.

ಈ ನಾಲ್ವರು ಅತೃಪ್ತರ ಪೈಕಿ ಉಮೇಶ್‍ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರ್ಗಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧಿಸಲು ಮುಂದಾಗಿದ್ದಾರೆ. ಶಾಸಕ ಮಹೇಶ್‍ಕಮಟಳ್ಳಿ ತಮ್ಮೆಲ್ಲಾ ಅಸಮಾಧಾನಗಳನ್ನು ಬದಿಗಿಟ್ಟು ಲೋಕಸಭೆ ಚುನಾವಣೆ ಸಿದ್ದತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ, ಬೆಳಗಾವಿ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಳ್ಳಾರಿ ಕ್ಷೇತ್ರದ ಶಾಸಕ ನಾಗೇಂದ್ರ ಈವರೆಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಲೋಕಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ನಾಗೇಂದ್ರ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಅವರೊಂದಿಗೆ ಇನ್ನೊಬ್ಬ ಶಾಸಕ ಜೆ.ಎನ್.ಗಣೇಶ್ ಅವರೂ ಕೂಡ ಗೈರು ಹಾಜರಾಗಿದ್ದಾರೆ.

ಶಾಸಕ ಆನಂದ್‍ಸಿಂಗ್ ಅವರ ಮೇಲೆ ರೆಸಾರ್ಟ್‍ನಲ್ಲಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಜೆ.ಎನ್.ಗಣೇಶ್‍ಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅವರೂ ಕೂಡ ಚುನಾವಣೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ರಮೇಶ್‍ಜಾರಕಿಹೊಳಿ, ನಾಗೇಂದ್ರ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ.

ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರಗೊಂಡು ಅವರಿಗೆ ಕಾಂಗ್ರೆಸ್ ಪಕ್ಷದಿಂದ ಬಿಡುಗಡೆಗೊಂಡರೆ, ರಮೇಶ್ ಜಾರಕಿಹೊಳಿ ಮತ್ತು ನಾಗೇಂದ್ರ ಅವರು ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿದ್ದಾರೆ ಎಂಬ ವದಂತಿಗಳಿವೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಈ ಇಬ್ಬರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಅವರ ಪಾಡಿಗೆ ಅವರಿದ್ದಾರೆ.

ತಟಸ್ಥವಾಗಿ ಉಳಿದರೆ ತೀರಾ ಸಮಸ್ಯೆ ಇಲ್ಲ. ಆದರೆ, ಅನ್ಯ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದರೆ ಅವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Facebook Comments