ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ : ತಪ್ಪಿದ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಮಾ.15- ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸೊಳ್ಳೆಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳ ಸಕಾಲಿಕ ಕ್ರಮದಿಂದಾಗಿ ಎರಡನೆ ಬಾರಿಗೆ ಅನಾಹುತ ತಪ್ಪಿದೆ. ಪಕ್ಕದಲ್ಲೇ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯವಿದ್ದು, ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಸಕಾಲದಲ್ಲಿ ಬೆಂಕಿಯನ್ನು ಎರಡು ಗಂಟೆಗಳ ಕಾರ್ಯಚರಣೆ ನಡೆಸಿ ನಂದಿಸಿದ್ದರಿಂದ ಇತರೆಡೆಗೆ ಹರಡುವುದು ತಪ್ಪಿದ್ದು, ಸುಮಾರು 35-40 ಎಕರೆಯಷ್ಟು ಮೀಸಲು ಅರಣ್ಯ ಬೆಂಕಿಗಾಹುತಿಯಾಗಿದೆ.

ವೀರನಹೊಸಹಳ್ಳಿ ವಲಯದಿಂದ ಸುಮಾರು 300 ಮೀಟರ್ ದೂರದ ಎಚ್‍ಡಿ ಕೋಟೆ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ದಟ್ಟ ಹೊಗೆ ಕಾಣಿಸಿಕೊಂಡಿದ್ದನ್ನು ವಾಚ್‍ಟವರ್‍ನಲ್ಲಿದ್ದ ವನ್ಯಜೀವಿ ವಿಭಾಗದ ಫೈರ್ ವಾಚರ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ನಾಗರಹೊಳೆ ಉದ್ಯಾನದ ಎಸಿಎಫ್ ಪ್ರಸನ್ನಕುಮಾರ್, ಆರ್‍ಎಫ್‍ಒ ರವೀಂದ್ರ ಸ್ಥಳಕ್ಕೆ ಧಾವಿಸಿ, ಎರಡು ಅಗ್ನಿಶಾಮಕ ಹಾಗೂ ಆರ್‍ಆರ್‍ಟಿ ವಾಹನಗಳೊಂದಿಗೆ ವೀರನಹೊಸಹಳ್ಳಿ ಮತ್ತು ಮೇಟಿಕುಪ್ಪೆಯ ಅರಣ್ಯ ಸಿಬ್ಬಂದಿ, ಫೈರ್‍ವಾಚರ್‍ಗಳು, ಮೀಸಲು ಅರಣ್ಯ ಪ್ರದೇಶದ ಸಿಬ್ಬಂದಿಗಳು ಹಾಗೂ ಬೆಂಕಿನಂದಿಸುವ ಪರಿಕರಗಳೊಂದಿಗೆ ಧಾವಿಸಿ ಸಂಜೆವರೆಗೂ ಸ್ಥಳದಲ್ಲಿದ್ದು, ಬಿಂದಿಗೆ ಮೂಲಕ ನೀರನ್ನು ಹೊತ್ತು ತಂದು ಕಿಡಿ ಇತರೆಡೆಗೆ ಹಾರದಂತೆ ಕಟ್ಟೆಚ್ಚರ ವಹಿಸಿದ್ದರು. 80ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಫೆ.23ರಂದು ಇದೇ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು, ಪಕ್ಕದ ವೀರನಹೊಸಹಳ್ಳಿ ವಲಯಕ್ಕೂ ಹರಡಿ ಸುಮಾರು 50 ಎಕರೆಯಷ್ಟು ಮೀಸಲು ಅರಣ್ಯಪ್ರದೇಶ ಬೆಂಕಿಗಾಹುತಿಯಾಗಿತ್ತು.  ಆಗ ನಾಗರಹೊಳೆ ಸಿಎಫ್‍ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಕಿ ತಹಬಂದಿಗೆ ತಂದಿದ್ದರು. ಅದಾದ 20 ದಿನದಲ್ಲೇ ಮತ್ತೆ ಬೆಂಕಿ ಬಿದ್ದಿರುವುದು ವನ್ಯಪ್ರಿಯರಲ್ಲಿ ಆತಂಕ ಮೂಡಿಸಿದೆ.

Facebook Comments