ಬಸ್ ಬಂತು.. ಬಸ್.. ಒಂದೇ ದಿನಕ್ಕೆ ಠುಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಚುನಾವಣೆ ಸಂದರ್ಭದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಂತೆ ಸಾದಾರ್ಲಹಳ್ಳಿಗೆ ಬಸ್ಸೇನೋ ಬಂತು, ಬಂದಷ್ಟೇ ವೇಗವಾಗಿ ಮಾಯವಾಗಿದ್ದು ವಿಪರ್ಯಾಸ. ಜನ ಬಸ್ ಬಂತೆಂದು ಸಂತಸ ಪಟ್ಟ ಕೆಲವೇ ಕ್ಷಣಗಳಲ್ಲಿ ಬಸ್ ಮತ್ತೆ ಮಾಯವಾಗಿದ್ದು ಮಾತ್ರ ಎಲ್ಲರಿಗೂ ಅಚ್ಚರಿಯೊಂದಿಗೆ ಮತ್ತೆ ಕಾಲ್ನಡಿಗೆಗೆ ಜೋತು ಬೀಳುವಂತಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಾದಾರ್ಲಹಳ್ಳಿಯಲ್ಲಿ ಬಹಳ ಹಿಂದಿನಿಂದಲೂ ಸಾರಿಗೆ ಬಸ್ ಸೌಲಭ್ಯವಿಲ್ಲದ್ದನ್ನು ಅರಿತು ತಾವು ಶಾಸಕನಾದ ಬಳಿಕ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು.

ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಸಚಿವರು, ಮಾರ್ಚ್ 5ರಂದು ಸಾದಾರ್ಲಹಳ್ಳಿಯಿಂದ ಬಸ್ ವ್ಯವಸ್ಥೆಗೆ ಸ್ವತಃ ಸಚಿವರೇ ಟಿಕೆಟ್ ಪಡೆದು ಬೆಳಗಿನ 7 ಗಂಟೆಯ ಬಸ್‍ನಲ್ಲಿ ಪ್ರಯಾಣಿಸುವ ಮೂಲಕ ಚಾಲನೆಯನ್ನೂ ಕೊಟ್ಟಿದ್ದರು.

ಜನಪ್ರತಿನಿಧಿಗಳು ನೀಡಿದ್ದ ಭರವಸೆ ಹುಸಿಯಾಗಲಿಲ್ಲ ಎಂದು ಸಂತಸಗೊಂಡಿದ್ದ ಜನರಲ್ಲಿ, ಐದು ದಶಕಗಳಿಂದ ಬಸ್ ಸೌಲಭ್ಯವಿಲ್ಲದೆ ನರಳುತ್ತಿದ್ದ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂಭ್ರಮ-ಸಡಗರ ಮನೆ ಮಾಡಿತ್ತು. ಅಲ್ಲದೆ ಹರ್ಷೋದ್ಘಾರದೊಂದಿಗೆ ನೂತನ ವ್ಯವಸ್ಥೆಯನ್ನು ಸ್ವಾಗತಿಸಿದ್ದರು.

ಈ ಸಂತೋಷ ಸಂಭ್ರಮ, ಸಡಗರ ಉಳಿದಿದ್ದು ಕೆಲವೇ ಗಂಟೆಗಳು ಮಾತ್ರ. ಅಂದು ಬೆಳಗ್ಗೆ ಚಾಲನೆಗೊಂಡ ಬಸ್ ಇಲ್ಲಿಂದ ತೆರಳಿದ್ದು ಬಿಟ್ಟರೆ ನಂತರ ಅದೇ ದಿನ ಸಂಜೆಯೂ ಸಹ ಗ್ರಾಮಕ್ಕೆ ಬರಲಿಲ್ಲ, ಅಂದಿನಿಂದ ಇಂದಿನವರೆಗೂ ಬಸ್ ಬರಲೇ ಇಲ್ಲ.

ಇಲ್ಲಿನ ಗ್ರಾಮಸ್ಥರು ಸಾರಿಗೆ ಬಸ್ ಇಂದು.. ನಾಳೆ.. ಬರುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾದು ಕಾದು ನಮಗೆ ಕಾಲ್ನಡಿಗೆಯೇ ಗತಿ. ಈ ಕುಗ್ರಾಮಕ್ಕೆ ಯಾರೂ ಏನೂ ಮಾಡೋಲ್ಲ… ಸುಮ್ಮನೆ ಅಂಗೈಯಲ್ಲಿ ಆಕಾಶ ತೋರಿಸ್ತಾರೆ ಎಂದು ಈಗ ಹಿಡಿಶಾಪ ಹಾಕುತ್ತಿದ್ದಾರೆ.

ಬಾರದ ಕೆಂಪುಬಸ್ ಸಾದಾರ್ಲಹಳ್ಳಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, ಇದು ನಗರಗೆರೆ ಹೋಬಳಿಯ ಗಡಿಭಾಗದಲ್ಲಿದೆ. ಇಲ್ಲಿನ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳಿಂದ ಎಲ್ಲಾ ಸೌಲಭ್ಯಗಳೂ ಸಹ ಮರೀಚಿಕೆಯಾವೆ.ಗ್ರಾಮದಿಂದ ಆಟೋ ಅಥವಾ ನಡೆದುಕೊಂಡು ವಾಟದ ಹೊಸಹಳ್ಳಿಗೆ ಬರಬೇಕು. ಅಲ್ಲಿಂದ ನಗರಗೆರೆ, ಗೌರಿಬಿದನೂರು ಕಡೆಗಳಿಗೆ ಬರಬೇಕಿದೆ. ಆನಾರೋಗ್ಯ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಈ ಭಾಗದ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯ.

ಇಂತಹ ಕುಗ್ರಾಮಕ್ಕೆ ಲಕ್ಷಾಂತರ ರೂ. ವೆಚ್ಚದಲ್ಲಿ ಜನಪ್ರತಿನಿಧಿಗಳು ವ್ಯವಸ್ಥಿತವಾದ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಬಸ್ ಸೌಲಭ್ಯಕ್ಕೂ ಚಾಲನೆ ನೀಡಿದ್ದಾರೆ. ಆದರೆ, ಇಲ್ಲಿನ ಸಾರಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಅಥವಾ ಗ್ರಾಮೀಣ ಭಾಗಗಳ ಪ್ರಯಾಣಿಕರ ಬಗ್ಗೆ ಅಸಡ್ಡೆಯೋ ಸಚಿವರು ಚಾಲನೆ ನೀಡಿದ ದಿನ ಗ್ರಾಮಕ್ಕೆ ಬಂದ ಬಸ್ ಇಂದಿಗೂ ಬಂದೇ ಇಲ್ಲ.

ವಿದ್ಯಾರ್ಥಿಗಳ ಪಡಿಪಾಟಿಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಂದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಬೆಳಗ್ಗೆ ಹೋದ ಬಸ್ ಸಂಜೆಯೇ ಕಾಣೆಯಾಗಿತ್ತು.

ಸಾದಾರ್ಲಹಳ್ಳಿಗೆ ಹೋಗುವ ವಿದ್ಯಾರ್ಥಿಗಳು ಕಾದು ಕಾದು ಬೇರೆ ಬಸ್‍ಗಳಲ್ಲಿ ವಾಟದಹೊಸಹಳ್ಳಿಗೆ ಬಂದು ಅಲ್ಲಿಂದ ಯಥಾ ಪ್ರಕಾರ ಕಾಲ್ನಡಿಗೆಯಲ್ಲೇ ಗ್ರಾಮಕ್ಕೆ ಬರುವಂತಾಗಿದೆ.ಸಾರ್…ಬಸ್..ಬಂತು..ಬಸ್ ಎಂದು ಗ್ರಾಮಸ್ಥರು ಬಹಳ ಸಂತೋಷಪಟ್ಟರು.

ಈಗಲಾದರೂ ನಮ್ಮ ಗ್ರಾಮವೊಂದು ಇದೆ ಎಂಬುದು ಸರಕಾರದ ಗಮನಕ್ಕೆ ಬಂತಲ್ಲಾ ಅಂದ್ಕೊಡ್ವಿ … ಆದರೆ, ಅದು ಕೆಲವೇ ಗಂಟೆಗಳಲ್ಲಿ ನಿರಾಸೆಯಾಯಿತು. ಬಸ್‍ಗೆ ಚಾಲನೆ ನೀಡಿದ ದಿನ ಬಂದ ಬಸ್ ಇಂದಿಗೂ ಇತ್ತ ಕಡೆ ಬಂದಿಲ್ಲ, ಸಾರಿಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ಕೊಡುತ್ತಾರೆ.

ಗ್ರಾಮೀಣ ಭಾಗದ ಜನರು ಅಂದರೆ ಇಷ್ಟೊಂದು ಅಸಡ್ಡೆನಾ…? ಎಂದು ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಳಪ್ಪ ಬೇಸರ ವ್ಯಕ್ತಪಡಿಸುತ್ತಾರೆ.ಗೌರಿಬಿದನೂರಿನಿಂದ ಬೆಳಗ್ಗೆ 7 ಗಂಟೆಗೆ ಹುದುಗೂರು, ವಾಟದ ಹೊಸಹಳ್ಳಿ ಸಾದಾರ್ಲಹಳ್ಳಿ ಮಾರ್ಗವಾಗಿ ಬಸ್ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ನಾಲ್ಕು ಸಿಂಗಲ್ ಈ ಬಸ್ ಪ್ರಯಾಣಿಸುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಈ ನೂತನ ಮಾರ್ಗಮಾಡಲಾಗಿದೆ.

ಕೆಲವು ತಾಂತ್ರಿಕ ಕಾರಣಗಳಿಂದ ಅಂದರೆ ಮಾರ್ಗದ ಸ್ಟೇಜ್‍ಗಳಿಗೆ ಟಿಕೆಟ್ ಇಟಿಎಂ ಅಪ್‍ಲೋಡ್ ಮಾಡುವಲ್ಲಿ ವಿಳಂಬವಾಗಿದೆ. ಸದ್ಯದಲ್ಲೇ ಬಸ್ ಚಾಲನೆ ನೀಡಲಾಗುವುದು ಎಂದು ಗೌರಿಬಿದನೂರು ಸಾರಿಗೆ ಘಟಕದ ವ್ಯವಸ್ಥಾಪಕ ಶರೀಫ್ ಭರವಸೆ ನೀಡಿದ್ದಾರೆ.

– ದೇವಿಮಂಜುನಾಥ್, ಗೌರಿಬಿದನೂರು

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )