2019ರ ಮಹಾಸಮರ : ನಾಳೆಯಿಂದ ಮೊದಲ ಹಂತದ ನಾಮಪತ್ರ ಸಲ್ಲಿಕೆ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.17-ರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮಹಾ ಹಬ್ಬವಾದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಆಂಧ್ರಪ್ರದೇಶ, ತೆಲಂಗಾಣ, ಅಂಡಮಾನ್ ನಿಕೋಬಾರ್ ಸೇರಿದಂತೆ 20 ರಾಜ್ಯಗಳ 91 ಕ್ಷೇತ್ರಗಳಿಗೆ ನಾಳೆ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಳೆಯಿಂದಲೇ ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ.

ಪ್ರಸ್ತುತ ಲೋಕಸಭೆ ಚುನಾವಣೆ ದೇಶಾದ್ಯಂತ ಏಳು ಹಂತದಲ್ಲಿ ನಡೆಯುತ್ತಿದೆ. ಮೊದಲ ಹಂತದ ಚುನಾವಣಾ ಪ್ರಕ್ರಿಯೆ ನಾಳೆಯಿಂದ ಆರಂಭವಾಗಲಿದೆ.
ಮೊದಲ ಹಂತದ 91 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮಾ.25 ರವರೆಗೂ ನಾಮಪತ್ರ ಸಲ್ಲಿಸಲು ಭಾರತದ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ.
ಮಾ.26ರಂದು ನಾಮಪತ್ರಗಳ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್ ಪಡೆಯಲು ಮಾ.28ರವರೆಗೆ ಕಾಲಾವಕಾಶವಿದೆ.

ಏ.11 ರಂದು ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 23 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒರಿಸ್ಸಾ, ಸಿಕ್ಕಿಂ, ತ್ರಿಪುರಾ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಉತ್ತರಾಖಂಡ್, ಲಕ್ಷದ್ವೀಪ, ಅರುಣಾಚಲ ಪ್ರದೇಶ ಹಾಗೂ ಛತ್ತೀಸ್‍ಘಡ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದ ಮತದಾನ ಏ.11 ರಂದು ನಡೆದರೆ, ಕೊನೆಯ ಏಳನೇ ಹಂತದ ಮತದಾನ ಮೇ 19 ರಂದು ನಡೆಯಲಿದೆ. ಕರ್ನಾಟಕದಲ್ಲಿ 2 ಮತ್ತು 3ನೇ ಹಂತದಲ್ಲಿ ಮತದಾನವಾಗಲಿದೆ.ಚುನಾವಣಾ ಆಯೋಗ ರಾಷ್ಟ್ರಾದ್ಯಂತ ಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳೂ ಹಾಗೂ ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ.

ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್ ಪಕ್ಷ ನಾಲ್ಕು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತೃಣಮೂಲ ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸುತ್ತಿವೆ.

ಈಗಾಗಲೇ ಹಲವು ರಾಜಕೀಯ ಪಕ್ಷಗಳು ವಿಧ್ಯುಕ್ತವಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಆಡಳಿತಾರೂಢ ಬಿಜೆಪಿ ಒಂದೆರಡು ದಿನದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ.

ಮಂಗಳವಾರದಿಂದ ನಾಮಪತ್ರ ಸಲ್ಲಿಕೆ:  ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಏ.18 ರಂದು ಮತದಾನ ನಡೆಯಲಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )