ಹಳಿ ಮೇಲೆ ಪಬ್‍ಜಿ ಗೇಮ್ ಆಡುತ್ತಿದ್ದ ಇಬ್ಬರನ್ನು ಉಚ್ಚಿಕೊಂಡು ಹೋದ ರೈಲು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮಾ.18- ರೈಲ್ವೆ ಹಳಿ ಮೇಲೆ ಪಬ್‍ಜಿ ಗೇಮ್ ಆಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ. ಇದರೊಂದಿಗೆ ಅತ್ಯಂತ ಅಪಾಯಕಾರಿಯಾದ ಮಲ್ಟಿಪ್ಲೇಯರ್ ಗೇಮ್ ಪಬ್‍ಜಿಗೆ ಇನ್ನಿಬ್ಬರು ಬಲಿಯಾದಂತಾಗಿದೆ. ನಾಗೇಶ್ ಗೋರೆ(24) ಮತ್ತು ಸ್ವಪ್ನಿಲ್ ಅನ್ನಪೂರ್ಣೆ(22) ಮೃತಪಟ್ಟ ದುರ್ದೈವಿಗಳು.

ಹೈದರಾಬದ್‍ನಿಂದ ಅಜ್ಮೇರ್‍ಗೆ ಬರುತ್ತಿದ್ದ ರೈಲು ಹಳಿ ಮೇಲೆ ಮಲ್ಟಿಪ್ಲೇಯರ್ ಗೇಮ್ ಆಡುತ್ತಿದ್ದ ಈ ಇಬ್ಬರ ಮೇಲೆ ಹರಿದಿದೆ. ಆಟದಲ್ಲಿ ಮಗ್ನರಾಗಿದ್ದ ಇವರಿಗೆ ರೈಲು ಬರುವುದು ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ ಮುಂಬೈನಿಂದ 570 ಕಿ.ಮೀ ದೂರದಲ್ಲಿ ಘಟನೆ ಜರುಗಿದ್ದು, ತಡ ರಾತ್ರಿ ದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ ಹಲವಾರು ನಗರಗಳಲ್ಲಿ ಗೇಮ್‍ನಿಂದಾಗಿ ಹಲವರು ಮೃತಪಟ್ಟಿದ್ದಾರೆ. ಇದನ್ನು ಕಿಲ್ಲರ್ ಗೇಮ್ ಎಂದೇ ಪರಿಗಣಿಸಿ ಮಕ್ಕಳು ಮತ್ತು ಯುವಕರಿಗೆ ಸರ್ಕಾರ ಎಚ್ಚರಿಕೆ ನೀಡಿದ್ದರೂ ದುರ್ಘಟನೆ ಸಂಭವಿಸುತ್ತಿರುವುದು ದುರಂತ. ಒಂದು ವರ್ಷದ ಹಿಂದೆ ಭಾರತಕ್ಕೆ ಲಗ್ಗೆ ಇಟ್ಟ ಈ ಅಪಾಯಕಾರಿ ಗೇಮ್‍ನನ್ನು ಅನೇಕ ರಾಜ್ಯಗಳು ನಿಷೇಧಿಸಿವೆ. ಆದರೂ ಈ ಆಟದ ವ್ಯಸನ ಹೊಂದಿರುವ ಮಕ್ಕಳು ಮತ್ತು ಯುವ ಸಮುದಾಯ ಕದ್ದುಮುಚ್ಚಿ ಗೇಮ್‍ನಲ್ಲಿ ತೊಡಗುತ್ತಿದ್ದಾರೆ.

ಇದು ಒಂದು ರೀತಿ ಕಳ್ಳ-ಪೊಲೀಸ್ ಆಟ. ಪೊಲೀಸರು ಮತ್ತು ಆಟಗಾರರನ್ನು ಒಳಗೊಂಡ ಈ ಕ್ರೀಡೆ ಒಂದು ರೀತಿಯ ವ್ಯಸನವಾಗಿ ಪರಿಣಮಿಸಿ ಸಾವುನೋವುಗಳಿಗೆ ಕಾರಣವಾಗುತ್ತಿದೆ. ಈ ಗೇಮ್ ಆಡುವವರನ್ನು ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದರೂ ನಿಯಮ ಉಲ್ಲಂಘಿಸಿ ಆಟದಲ್ಲಿ ತೊಡಗಿದ್ದ 10 ಮಂದಿಯನ್ನು ರಾಜ್‍ಕೋಟ್‍ನಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )