ಇದೇ ಮೊದಲ ಬಾರಿಗೆ 4 ಗಂಟೆ ತಡವಾಗಿ ಶ್ರೀಕಂಠೇಶ್ವರ ರಥೋತ್ಸವ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಮಾ.19- ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರನ ಪಂಚಮಹಾ ರಥೋತ್ಸವಕ್ಕೆ ಇದೇ ಮೊದಲ ಬಾರಿಗೆ ಮಹಾ ಅಡ್ಡಿ ಎದುರಾಗಿ 4 ಗಂಟೆಗಳ ಕಾಲ ತಡವಾಗಿ ನೇರವೇರಿತು.

ಗೌತಮ ಪಂಚ ಮಹಾ ರಥೋತ್ಸವ ಎಂದೇ ಖ್ಯಾತಿ ಪಡೆದ ರಥೋತ್ಸವ ಇಂದು ಬೆಳಿಗ್ಗೆ 6.45ರ ಮೀನ ಲಗ್ನದಲ್ಲಿ ನಿಗದಿತ ಸಮಯಕ್ಕೆ ಚಾಲನೆಗೊಂಡಿತಾದರೂ ಲಕ್ಷಾಂತರ ಭಕ್ತರ ನಡುವೆ ಹರ್ಷೋದ್ಘಾರದೊಂದಿಗೆ ರಥ ಸ್ವಲ್ಪ ದೂರ ಎಳೆಯುತ್ತಿದ್ದಂತೆ ಅದಕ್ಕೆ ಕಟ್ಟಲಾಗಿದ್ದ 200 ಅಡಿ ಉದ್ದದ ಹಗ್ಗ ತುಂಡಾಗಿ ಬಿದ್ದಿದ್ದರಿಂದ ಭಾರೀ ಅವಘಡ ಸಂಭವಿಸದಿದ್ದರೂ ರಥೋತ್ಸವಕ್ಕೆ ಅಡ್ಡಿ ಎದುರಾಯಿತು.

ಹಳೆಯ ಹಗ್ಗವಾದ್ದರಿಂದ ತುಂಡಾ ಗಿದೆ ಎಂದು ಕೂಡಲೇ ತಂದಿರಿಸಿದ್ದ ಹೊಸ ಹಗ್ಗವನ್ನು ಕಟ್ಟಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತಾದರೂ ರಥ ಚಲಿಸಲೇ ಇಲ್ಲ. ಜೊತೆಗೆ ಹಗ್ಗವೂ ಮತ್ತೆ ತುಂಡಾಯಿತು. ನಂತರ ಇನ್ನೊಂದು ಹೊಸ ಹಗ್ಗವನ್ನು ತರಿಸಿ ರಥ ಎಳೆದರೂ, ರಥ ಅಲುಗಾಡದೆ ನಿಂತಿತ್ತು.

ಈ ವೇಳೆ 3 ಜೆಸಿಬಿಗಳ ಸಹಾಯದಿಂದ ರಥೋತ್ಸವಕ್ಕೆ ಮತ್ತೆ ಚಾಲನೆ ನೀಡಲಾಯಿತು.ಹಾಗಾಗಿ ಬೆಳಗ್ಗೆ 9 ಗಂಟೆಯೊಳಗೆ ಪಂಚ ಮಹಾ ರಥಗಳು ಒಂದರ ಹಿಂದೆ ಒಂದು ಸಾಗಿ ಬರಬೇಕಾಗಿದ್ದ ಉತ್ಸವದಲ್ಲಿ ಭಾರೀ ಗೊಂದಲ, ಆತಂಕ ಎದುರಾಗಿ ನಾಲ್ಕು ಗಂಟೆಗೂ ಹೆಚ್ಚು ಕಾಲ ತಡವಾಯಿತು.

ಸುಮಾರು 11 ಗಂಟೆ ಸಮಯವಾದರೂ ನಿಗದಿತವಾಗಿ ಕ್ರಮಿಸಬೇಕಿದ್ದ ದೂರವನ್ನು ರಥ ಕ್ರಮಿಸಿರಲಿಲ್ಲ. ಲಕ್ಷಾಂತರ ಮಂದಿ ರಥೋತ್ಸವವನ್ನು ಕಣ್ತುಂಬಿ ಕೊಳ್ಳಲು ನಿಂತಿದ್ದವರು ಕಾದು ಕೂರುವಂತಾಯಿತು.

ಬಹಳಷ್ಟು ಹಳೆಯದಾಗಿದ್ದ ಹಗ್ಗ ತುಂಡಾಗಿ ಬಿದ್ದಾಗ ಸ್ಥಳದಲ್ಲೇ ಇದ್ದ ಎಇಒ ಗಂಗಯ್ಯ ಅವರ ಮುಖದ ಮೇಲೆ ಬಿದ್ದು ಅವರ ಬಾಯಿಯಿಂದ ರಕ್ತ ಸೋರಿ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಇನ್ನು ರಥ ಎಳೆಯಲು ಮುಂದೆ ನಿಂತಿದ್ದ ಶಾಸಕ ಹರ್ಷವರ್ಧನ್ ಹಾಗೂ 150 ಕ್ಕೂ ಹೆಚ್ಚು ಮಂದಿ ಹಗ್ಗ ತುಂಡಾದ ಸಂದರ್ಭದಲ್ಲಿ ಒಮ್ಮೆಲೆ ನೆಲಕ್ಕೆ ಬಿದ್ದರು.

ಆದರೆ ಅದೃಷ್ಟ ವಶಾತ್ ಯಾವುದೇ ತೊಂದರೆ ಉಂಟಾಗ ಲಿಲ್ಲ. ಕಾರ್ಯ ನಿರ್ವಹಕಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಮಹೇಶ್‍ಕುಮಾರ್, ಅಸಿಸ್ಟೆಂಟ್ ಕಮೀಷನರ್ ಶಿವೇಗೌಡ ಸೇರಿದಂತೆ ದೇವಾಲಯ ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )