ಬದಲಿ ನಿವೇಶನ ಹೆಸರಿನಲ್ಲಿ ಭಾರೀ ಗೋಲ್‍ಮಾಲ್ :  ಎನ್.ಆರ್.ರಮೇಶ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.19- ಪಾಲಿಕೆ ಮಾಜಿ ಸದಸ್ಯರು ಕಾನೂನು ಬಾಹಿರವಾಗಿ ಬಿಡಿಎ ಅಧಿಕಾರಿಗಳ ಜತೆಗೂಡಿ ಸುಮಾರು 600 ಕೋಟಿ ರೂ. ಮೌಲ್ಯದ 245 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಇಂದಿಲ್ಲಿ ಆರೋಪಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, 688 ಪುಟಗಳ ದಾಖಲೆ ಬಿಡುಗಡೆ ಮಾಡಿ ಬಿಡಿಎನಲ್ಲಿ ದೊಡ್ಡ ಹಗರಣ ನಡೆದಿದ್ದು, ಇದು ಬಯಲಿಗೆ ಬರಬೇಕು ಎಂದು ಒತ್ತಾಯಿಸಿದರು.ಶಾಮ್‍ಭಟ್ ಅವರು ಬಿಡಿಎ ಆಯುಕ್ತರಾಗಿದ್ದ ಅವಧಿಯಲ್ಲಿ ಹನುಮಂತೇಗೌಡ ಅವರು ತಮ್ಮ ಪತ್ನಿ, ತಾಯಿ, ಅಣ್ಣ, ಅತ್ತಿಗೆ ಸೇರಿದಂತೆ ಅವರ ಸಂಬಂಧಿಕರ ಹೆಸರಿನಲ್ಲಿ 245 ಬದಲಿ ನಿವೇಶನಗಳ ಹಂಚಿಕೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಎಚ್‍ಎಸ್‍ಆರ್ ಬಡಾವಣೆ, ಜ್ಞಾನಭಾರತಿ ಬಡಾವಣೆ, ಬನಶಂಕರಿ 6ನೆ ಹಂತ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಈ ಬದಲಿ ನಿವೇಶನಗಳನ್ನು ಪಡೆದಿದ್ದಾರೆ.ಹೊಸ ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲಾಗುವ ಪ್ರದೇಶಗಳ ವಿವರಗಳನ್ನು ಅಧಿಕಾರಿಗಳಿಂದ ಮೊದಲೇ ಸಂಗ್ರಹಿಸಿ, ಆ ಪ್ರದೇಶಗಳ ಭೂ ಮಾಲೀಕರ ದಿಕ್ಕು ತಪ್ಪಿಸಿ ಸ್ವತ್ತುಗಳನ್ನು ಖರೀದಿಸಿದ್ದಾರೆ.

ಬಿಡಿಎನಿಂದ ಅಧಿಸೂಚನೆ ಹೊರಟ ನಂತರ ಪರಿಹಾರ ರೂಪದಲ್ಲಿ ಶೇ. 50:50 ರ ಅನುಪಾತದಲ್ಲಿ ಅಭಿವೃದ್ಧಿಗೊಂಡ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಪಡೆದಿದ್ದಾರೆ.

ಇಲ್ಲಿ ಭಾರೀ ಗೋಲ್‍ಮಾಲ್ ನಡೆದಿದ್ದು, ಪರಿಹಾರದ ಸಂದರ್ಭದಲ್ಲಿ ಭೂ ಮಾಲೀಕರು ಸಲ್ಲಿಸಬೇಕಾದ ಪಹಣಿ, 14 ವರ್ಷಗಳ ಋಣಭಾರ ರಹಿತ ಪತ್ರ, 12 ವರ್ಷಗಳ ಸಾಗುವಳಿ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಲ್ಲಿ ನೀಡದಿರುವುದು ಹಗರಣ ನಡೆದಿರುವುದಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದ್ದಾರೆ.

ಬಿಡಿಎ ಕೂಡ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಟೀಕಾಪ್ರಹಾರ ನಡೆಸಿರುವ ಅವರು ಇದರಲ್ಲಿ ಭಾಗಿಯಾಗಿರುವ ಹಿಂದಿನ ಆಯುಕ್ತರಾದ ಶಾಮ್‍ಭಟ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಯಶವಂತಪುರ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ಅವರು ಕೂಡ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಆದರೆ, ಈಗ ಅವರು ತಣ್ಣಗಾಗಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಎನ್.ಆರ್.ರಮೇಶ್ ದೂರಿದರು. ಇದು ಕೇವಲ ಒಬ್ಬರ ಸ್ಯಾಂಪಲ್ ಅಷ್ಟೆ. ಇದೇ ರೀತಿ ಕಳೆದ 20 ವರ್ಷಗಳಿಂದ ನೂರಾರು ಪ್ರಭಾವಿಗಳು ಭ್ರಷ್ಟ ಅಧಿಕಾರಿಗಳ ಸಹಾಯ ದಿಂದ ಸಾವಿರಾರು ಬದಲಿ ನಿವೇಶನಗಳನ್ನು ಪ್ರಮುಖ ಬಡಾವಣೆಗಳಲ್ಲಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಧ್ಯವರ್ತಿಗಳ ಮೂಲಕ ಅಮಾಯಕ ಭೂ ಮಾಲೀಕರನ್ನು ಸಂಪರ್ಕಿಸಿ, ಭೂ ಸ್ವಾಧೀನದ ಬಗ್ಗೆ ದಿಗಿಲುಗೊಳ್ಳುವಂತೆ ಮಾಡಿ – ನಂತರ ಅವರಿಂದ ಕಡಿಮೆ ಬೆಲೆಗೆ ಭೂಮಿಯನ್ನು ಕ್ರಯಕ್ಕೆ ಪಡೆಯುವವರೂ ಇದರಲ್ಲಿ ಇದ್ದಾರೆ.

ಕೂಡಲೇ ಇದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಮನ ಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಹಾಗೂ ನ್ಯಾಯಾಲಯದಲ್ಲೂ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )