ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮಾ.19- ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶೃಂಗೇರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸೀಟು ಹಂಚಿಕೆ ಒಪ್ಪಂದದಂತೆ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿತ್ತು. ಈಗ ಜೆಡಿಎಸ್ ಚಿಹ್ನೆಯಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ನಲ್ಲಿರುವ ಪ್ರಮೋದ್ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಲು ಕಾನೂನು ತೊಡಕು ಎದುರಾಗಲಿದೆ ಎಂಬುದಕ್ಕೆ ಸದ್ಯ ಪ್ರಮೋದ್ ಯಾವುದೇ ಚುನಾಯಿತ ಸದಸ್ಯರಲ್ಲ.

ಹಾಗಾಗಿ ಬೇರೆ ಪಕ್ಷದಲ್ಲಿ ಸದಸ್ಯತ್ವ ಇದ್ದು, ಚುನಾವಣೆಗೆ ಮಾತ್ರ ಇನ್ನೊಂದು ಪಕ್ಷದಿಂದ ಸ್ಪರ್ಧಿಸಿದರೆ ಕಾನೂನು ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗಿದೆ.ಬಿಜೆಪಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸುವುದು ಎಂದು ಇನ್ನೂ ಅಂತಿಮಗೊಂಡಿಲ್ಲ. ಉಡುಪಿ-ಚಿಕ್ಕಮಗಳೂರು ಎರಡು ಜಿಲ್ಲೆಗಳ ಬಿಜೆಪಿ ಪ್ರಮುಖರು ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ನೀಡದಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಈ ಎರಡು ಭಾಗಗಳಲ್ಲಿ ತಮ್ಮ 5 ವರ್ಷದ ಅವಧಿಯಲ್ಲಿ ಏನೂ ಕೆಲಸ ಮಾಡದೆ ಜನರ ಜೊತೆ ಇರದೆ ಇರುವುದರಿಂದ ಅಸಮಾಧಾನಗೊಂಡಿದ್ದು, ಇದರಿಂದಾಗಿ ಎದುರಾಳಿಗಳಿಗೆ ಅನುಕೂಲವಾಗುವುದನ್ನು ತಪ್ಪಿಸಲು ಜಯಪ್ರಕಾಶ್ ಹೆಗಡೆ ಅಥವಾ ಯಶಪಾಲ್ ಸುವರ್ಣ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಾಳೆ ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ನಡುವೆ ಶೋಭಾ ಕರಂದ್ಲಾಜೆ ಮಾಧ್ಯಮದವರೊಂದಿಗೆ ಮಾತನಾಡಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕ್ಷೇತ್ರ. ಈ ಕ್ಷೇತ್ರವನ್ನು ಕಾಂಗ್ರೆಸ್‍ನವರು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‍ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್‍ನ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಜೆಡಿಎಸ್ ಚಿಹ್ನೆಯಡಿ ಟಿಕೆಟ್ ನೀಡಿ ಕಣಕ್ಕಿಳಿಸುತ್ತಿರುವುದು ಹಾಸ್ಯಾಸ್ಪದ. ಆದರೆ ಯಾರೇ ನಿಂತರೂ ಬಿಜೆಪಿ ಗೆಲ್ಲುವುದು ಖಚಿತ ಎಂದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )