ಬ್ರೇಕಿಂಗ್ : ಧಾರವಾಡ ಕಟ್ಟದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10 ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ಮಾ.21- ಇಲ್ಲಿನ ಕುಮಾರೇಶ್ವರ ನಗರ ಬಹುಮಹಡಿ ಕಟ್ಟಡ ಕುಸಿತ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದ್ದು, ಅವಶೇಷಗಳಡಿಯಿಂದ ಇಂದು 8 ವರ್ಷದ ಮಗು ಸೇರಿದಂತೆ ಮೂವರ ಮೃತ ದೇಹಗಳನ್ನು ಕಾರ್ಯಾಚರಣೆ ಪಡೆ ಹೊರತೆಗೆದಿದೆ. ಮೃತಪಟ್ಟವರನ್ನು ದಿವ್ಯಾ (9), ದಾಕ್ಷಾಯಿಣಿ (48) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಮಾಹಿತಿ ತಿಳಿದುಬಂದಿಲ್ಲ.

ಸತತ 38 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿ ನಬೀಸಾಬ್ ನದಾಫ್ ಹಾಗೂ ಪ್ರೇಮಾ ಉಣಕಲ್ ಅವರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 12 ರಿಂದ 15 ಜನ ಕೆಳ ಮಹಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಅವರನ್ನು ಹೊರತೆಗೆಯಲು ಪ್ರಯತ್ನ ಮುಂದುವರಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಸತತವಾಗಿ ಈ ಭಾಗಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಬದುಕಿ ಬಂದಿರುವ ವಿದ್ಯಾರ್ಥಿ ನಬೀ ಸಾಬ್ ಅವರು ಧಾರವಾಡ ಜಿಲ್ಲೆಯ ಕಲಘಟಗಿ ಮೂಲದವರು. ಹಾಗೂ ಪ್ರೇಮಾ ಉಣಕಲ್ ಅವರು ಧಾರವಾಡದವರು ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ತಳ ಮಹಡಿಯಲ್ಲಿ ಪಾರ್ಕಿಂಗ್‍ನಲ್ಲಿದ್ದ ದ್ವಿಚಕ್ರ ಮತ್ತಿತರ ವಾಹನಗಳು ಜಖಂಗೊಂಡಿದ್ದು, ಅವುಗಳನ್ನು ರಕ್ಷಣಾ ಪಡೆ ಹೊರತೆಗೆಯುತ್ತಿದೆ. ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಹೆಚ್ಚು ಆದ್ಯತೆ ನೀಡಿದ್ದು, ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‍ಡಿಆರ್‍ಎಫ್ ಮುಖ್ಯಸ್ಥ ಶ್ರೀನಿವಾಸ್ ತಿಳಿಸಿದ್ದಾರೆ.

ಇನ್ನು ಅವಶೇಷಗಳಡಿ ಸಿಲುಕಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನುರಿತ ತಂಡ ಹಾಗೂ ನುರಿತ ಶ್ವಾನಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇಂದು ಸುರಕ್ಷಿತವಾಗಿ ಹೊರತೆಗೆದ ಇಬ್ಬರು ಆಯುರ್ವೇದ ಔಷಧಿ ಮಳಿಗೆಗೆ ಬಂದವರೆಂದು ಹೇಳಲಾಗಿದೆ. ಕಟ್ಟಡ ದುರಂತ ಸಂಭವಿಸಿದ ಸ್ಥಳಕ್ಕೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಮತ್ತಿತರರು ಆಗಮಿಸಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಇದಲ್ಲದೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ತಮ್ಮ ಸಂಬಂಧಿಕರು ಕಟ್ಟಡದ ಮಾಲೀಕರಾದರೂ ಪರವಾಗಿಲ್ಲ, ಕಾನೂನು ತನ್ನ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರಲ್ಲದೆ ನಾನು ಸಂತ್ರಸ್ತರ ಪರವಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವ ಕಟ್ಟ ಕಡೆಯ ವ್ಯಕ್ತಿಯನ್ನೂ ಸುರಕ್ಷಿತವಾಗಿ ಹೊರತರುವವವರೆಗೂ ನಮ್ಮ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಜೇನುಹುಳು- ಕಾರ್ಯಾಚರಣೆಗೆ ಅಡ್ಡಿ: ಕಾರ್ಯಾಚರಣೆ ಸಂದರ್ಭದಲ್ಲಿ ತಳ ಮಹಡಿಯಲ್ಲಿದ್ದ ಜೇನುಗೂಡಿನಲ್ಲಿದ್ದ ಹುಳುಗಳು ಹಾರಿದ ಪರಿಣಾಮ ಕಾರ್ಯಾಚರಣೆಗೆ ಕೆಲಕಾಲ ಅಡ್ಡಿಯಾಯಿತು. ಇವುಗಳನ್ನು ನಿಯಂತ್ರಿಸಿ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇಂದಿರಾ ಕ್ಯಾಂಟಿನ್‍ನಿಂದ ಆಹಾರ ಪೂರೈಕೆ: ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟಿನ್‍ನಿಂದ ಆಹಾರ ಪೂರೈಕೆ ಮಾಡಲಾಗುತ್ತಿದೆ.

ನಿಯಂತ್ರಣ ಕೊಠಡಿ ಸ್ಥಾಪನೆ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳು, ಮಾಹಿತಿ ನೀಡುವವರಿಗೆ ಪೊಲೀಸ್ ಆಯುಕ್ತರು ಸಹಾಯ ಕೇಂದ್ರ ಸ್ಥಾಪಿಸಿದ್ದು, ಸಾರ್ವಜನಿಕರು ಅವಶೇಷಗಳಡಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಬಹುದಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )