ಇನ್ಮುಂದೆ ವಾರಕ್ಕೊಮ್ಮೆ ಇಂದಿರಾ ಕ್ಯಾಂಟೀನ್ ಶುಚಿತ್ವ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21- ಇನ್ನು ಮುಂದೆ ಇಂದಿರಾ ಕ್ಯಾಂಟೀನ್‍ನ ಆಹಾರ ಮತ್ತು ಶುಚಿತ್ವದ ಬಗ್ಗೆ ವಾರಕ್ಕೊಮ್ಮೆ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ವಿಷಾಂಶ ಪತ್ತೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಇಂದು ನಾಯಂಡಹಳ್ಳಿ ಮತ್ತು ವಿಜಯನಗರದಲ್ಲಿರುವ ವಿವಿಧ ಇಂದಿರಾ ಕ್ಯಾಂಟೀನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಡೀ ದೇಶದಲ್ಲೇ ಪ್ರಶಂಸೆಗೆ ಒಳಗಾಗಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಕಳಪೆ ಆಹಾರ ಸರಬರಾಜು ಮಾಡುವುದು ಶುಚಿತ್ವ ಕಾಪಾಡದೆ ಇರೋದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ನಾಯಂಡಹಳ್ಳಿ ಇಂದಿರಾ ಕ್ಯಾಂಟೀನ್‍ಗೆ ಡಿಸಿಎಂ ಭೇಟಿ ನೀಡಿದಾಗ ಗ್ರಾಹಕರೊಬ್ಬರು ತಿಂಡಿ ಸೇವಿಸುತ್ತಿದ್ದ ತಟ್ಟೆಯಲ್ಲೇ ಇದ್ದ ಇಡ್ಲಿ ಸೇವಿಸಿ ಪರಿಶೀಲನೆ ನಡೆಸಿದರು.ಅದೇ ರೀತಿ ಇಂದಿರಾ ಕ್ಯಾಂಟೀನ್ ಗ್ರಾಹಕರಿಂದ ಊಟದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.

ನಂತರ ಮಾತನಾಡಿದ ಅವರು, ವಿಷಾಂಶ ಪತ್ತೆಯಾಗಿರುವ ಬಗ್ಗೆ ವರದಿಯನ್ನು ಸುಳ್ಳು ಅಂತ ಹೇಳೋಲ್ಲ. ಅದೇ ರೀತಿ ಅದನ್ನೇ ಅಧಿಕೃತ ವರದಿ ಎಂದು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಊಟದ ಸ್ಯಾಂಪಲ್ ಅನ್ನು ದಾಸಪ್ಪ ಆಸ್ಪತ್ರೆ ಮತ್ತು ಆಹಾರ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

198 ವಾರ್ಡ್‍ಗಳಲ್ಲಿ ಇರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಶುಚಿ ಮತ್ತು ರುಚಿಯಾದ ಊಟ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕೃತವಾಗಿ ವಾರಕ್ಕೊಮ್ಮೆ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು ಎಂದರು.

ಇಂದಿರಾ ಕ್ಯಾಂಟೀನ್‍ಗಳಿಗೆ ಊಟ ಸರಬರಾಜು ಮಾಡುವ ಗುತ್ತಿಗೆದಾರರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಉತ್ತಮ ಸರಬರಾಜು ಮಾಡದಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಹೇಳಿದರು.  ಕಳೆದ ಸರ್ಕಾರ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ರೂಪಿಸಿತ್ತು.

ಆ ಸಂದರ್ಭದಲ್ಲಿ ಯೋಜನೆ ಅನುಷ್ಠಾನ ಕುರಿತಂತೆ ಹಲವು ರೀತಿಯ ಅಭಿಪ್ರಾಯ ಬಂದಿತ್ತು. ಕೆಲ ಕ್ಯಾಂಟೀನ್ ದೋಷಗಳನ್ನು ಸರಿಪಡಿಸಿ ಇಡೀ ದೇಶಕ್ಕೆ ಮಾದರಿ ಯೋಜನೆಯನ್ನಾಗಿ ಮಾರ್ಪಾಡು ಮಾಡಲಾಗಿದೆ.

ಅಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮ್ಮಿಶ್ರ ಸರ್ಕಾರದಲ್ಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಊಟದಲ್ಲಿ ವಿಷಾಂಶ ಪತ್ತೆಯಾಗಿದೆ ಎಂಬ ವರದಿ ನಂತರ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಕ್ಲಾಸ್: ಇಂದಿರಾ ಕ್ಯಾಂಟೀನ್ ಪರಿಶೀಲನೆಗೆ ಬಂದ ಡಿಸಿಎಂ ಪರಮೇಶ್ವರ್ ಅವರನ್ನು ಗ್ರಾಹಕರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ನೀವು ಪರಿಶೀಲನೆಗೆ ಬರುತ್ತೀರಾ ಎಂಬ ಮಾಹಿತಿ ಪಡೆದು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಇಲ್ಲದಿದ್ದರೆ ಕ್ಯಾಂಟೀನ್‍ನಲ್ಲಿ ಊಟ ಮಾಡಲು ಸಾಧ್ಯವಾಗಲ್ಲ. ಇನ್ನು ಬಿಸಿ ನೀರಿಗೆ ಖಾರದ ಪುಡಿ ಹಾಕಿ ಸಾಂಬಾರ್ ಎಂದು ನೀಡುತ್ತಾರೆ.

ಕ್ಯಾಂಟೀನ್ ಊಟ ಮಾಡಿದರೆ ಆರೋಗ್ಯ ಹದಗೆಡುತ್ತದೆ. ಹೀಗಾಗಿ ಮುಂದೆ ಉತ್ತಮ ಊಟ ಕೊಡಿಸುವತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡರು. ಮೇಯರ್ ಗಂಗಾಂಬಿಕೆ, ಉಪ ಮೇಯರ್ ಭದ್ರೇಗೌಡ, ಆಯುಕ್ತ ಮಂಜುನಾಥ ಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )