ಹಾಸನದಲ್ಲಿ ಪ್ರಜ್ವಲ್‍ಗೆ ಬೆಂಬಲಿಸುವಂತೆ ‘ಕೈ’ ನಾಯಕರಿಗೆ ಸಿದ್ದು ಕಟ್ಟಪ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21-ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಒಮ್ಮತ ಮೂಡಿಸಲು ಇಂದು ನಡೆಯಬೇಕಿದ್ದ ಪ್ರಮುಖ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‍ನ ಸಚಿವ ಎಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿಹಾಸನದ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಮುಖ ನಾಯಕರ ನಡುವೆ ಇಂದು ಸಭೆ ಆಯೋಜಿಸಲಾಗಿತ್ತು.

ಆದರೆ, ಸಿದ್ದರಾಮಯ್ಯ ಅವರು ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಬೇಕಿದ್ದರಿಂದ ಇಂದಿನ ಸಭೆಯನ್ನು ರದ್ದುಗೊಳಿಸಲಾಗಿದೆ.
ಇಂದು ಬೆಳಗ್ಗೆ ಹಾಸನ ಜಿಲ್ಲೆಯಿಂದ ಎಂಎಲ್‍ಸಿ ಗೋಪಾಲಸ್ವಾಮಿ, ಮಾಜಿ ಸಚಿವ ಗಂಡಸಿ ಶಿವರಾಂ, ಎಚ್.ಕೆ.ಮಹೇಶ್ ಸೇರಿದಂತೆ ಹಲವಾರು ಮುಖಂಡರು ಸಿದ್ದರಾಮಯ್ಯ ಅವರ ಮನೆಗೆ ಬಂದು ಚರ್ಚೆ ನಡೆಸಿದರು.

ಹಾಸನದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರು ನಾಳೆ ನಾಪತ್ರ ಸಲ್ಲಿಸುತ್ತಿದ್ದು, ಕಾಂಗ್ರೆಸ್‍ನ ಎಲ್ಲಾ ಮುಖಂಡರು, ಕಾರ್ಯಕರ್ತರು ಅವರಿಗೆ ಬೆಂಬಲ ನೀಡಬೇಕೆಂದು ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರೇವಣ್ಣ ಅವರು ಆಹ್ವಾನ ನೀಡಿದರೆ ಹೋಗುತ್ತೇವೆ. ನಾವಾಗಿಯೇ ಹೋಗುವುದಿಲ್ಲ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪ್ರತ್ಯುತ್ತರಿಸಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಗಂಡಸಿ ಶಿವರಾಂ, ನಾಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುತ್ತಾರೆ. ಆಹ್ವಾನಿಸಿದರೆ ನಾವು ಹೋಗುತ್ತೇವೆ. ಇಲ್ಲದೇ ಹೋದರೆ ಮುಂದೆ ಏನು ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡರಾಗಿದ್ದ ಮಾಜಿ ಸಚಿವ ಎ.ಮಂಜು ಅವರು ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ. ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಇಂದು ನಡೆಯಬೇಕಿದ್ದ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ನಾಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್‍ನ ಎಲ್ಲಾ ನಾಯಕರು ಹಾಜರಿರುತ್ತಾರೆ. ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್ ಮಾತನಾಡಿ, ಎ.ಮಂಜು ಕಾಂಗ್ರೆಸ್ ತೊರೆದು ಹೋಗಿದ್ದಾರೆ. ಆದರೆ, ಅವರ ಪುತ್ರ ಕಾಂಗ್ರೆಸ್‍ನಲ್ಲೇ ಮುಂದುವರೆಯುವುದಾಗಿ ಹೇಳುತ್ತಿದ್ದಾರೆ. ನಾಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಂಜು ಅವರ ಪುತ್ರ ಮಂಥರಗೌಡ ಹಾಜರಿದ್ದರೆ ಪಕ್ಷದಲ್ಲೇ ಇದ್ದಾರೆ ಎಂದು ಅರ್ಥ. ಇಲ್ಲದೇ ಹೋದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )