ಕರಡಿ ದಾಳಿ : ಅಮಾಯಕ ವ್ಯಕ್ತಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.22-ಜಮೀನಿಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕರಡಿಯೊಂದು ದಾಳಿ ಮಾಡಿ ಕಚ್ಚಿ ಸಾಯಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಪಾವಗಡ ತಾಲೂಕು ಸಾಸಲುಕುಂಟೆ ಗ್ರಾಮದ ಅರಣ್ಯ ಪಕ್ಕದ ಜಮೀನಿಗೆ ಹೋಗುತ್ತಿದ್ದ ವೀರಾಂಜನೇಯ (45) ಕರಡಿ ದಾಳಿಯಿಂದ ಮೃತಪಟ್ಟಿರುವ ರೈತ.

ಇಂದು ಬೆಳಗ್ಗೆ 6.30ರ ಸಮಯದಲ್ಲಿ ಶಿವಪ್ಪರೆಡ್ಡಿ, ನರಸಿಂಹರೆಡ್ಡಿ, ಗೋಪಾಲರೆಡ್ಡಿ, ಯರ್ರಪ್ಪ ಹಾಗೂ ವೀರಾಂಜನೇಯ ಹೋಗುತ್ತಿದ್ದಾಗ ಬೇಲಿ ಮರೆಯಲ್ಲಿದ್ದ ಕರಡಿ ಏಕಾಏಕಿ ಇವರ ಮೇಲೆ ದಾಳಿ ನಡೆಸಿದೆ. ಕರಡಿಯನ್ನು ಓಡಿಸಲು ನೂರಾರು ಮಂದಿ ಗ್ರಾಮಸ್ಥರು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.

ಈ ವೇಳೆ ವೀರಾಂಜನೇಯ ಕರಡಿ ಕೈಗೆ ಸಿಕ್ಕಿ ಸಾವನ್ನಪ್ಪಿದರೆ ಜೊತೆಯಲ್ಲಿದ್ದವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪಾವಗಡ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಕ್ರೋಶ: ಬೆಳ್ಳಂಬೆಳಗ್ಗೆ ಕರಡಿ ದಾಳಿಯಿಂದ ಒಬ್ಬರು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿರುವ ಘಟನೆ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕರಡಿಯನ್ನು ಹಿಡಿಯಿರಿ, ಇಲ್ಲವೇ ಸಾಯಿಸಿ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಪದೇ ಪದೇ ಕರಡಿ ದಾಳಿಯಿಂದ ಅಮಾಯಕ ಜೀವಗಳು ಬಲಿಪಶು ಆಗುತ್ತಿವೆ.

ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಇಂದು ಅಮಾಯಕರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಕ್ರಮಕೈಗೊಳ್ಳದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು 5 ಲಕ್ಷ ರೂ. ಗಳ ಪರಿಹಾರದ ಚೆಕ್ಕನ್ನು ತೆಗೆದುಕೊಂಡು ಮೃತರ ವಾರಸುದಾರರಿಗೆ ಕೊಡಲು ಮುಂದಾದಾಗ ನಿಮ್ಮ ಹಣ ಯಾರಿಗೆ ಬೇಕು. ಸತ್ತವರನ್ನು ಬದುಕಿಸಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಗ್ರಾಮ ಸಹಾಯಕ ಅರಣ್ಯ ಇಲಾಖೆ ಅಧಿಕಾರಿಗಳು ಏನೂ ಮಾತನಾಡದೆ ಮೌನಕ್ಕೆ ಶರಣಾದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )