ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.22-ಗುಂಪೊಂದು ಅಪರಿಚಿತ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚೇಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 33 ವರ್ಷದಂತೆ ಕಾಣುವ ಈ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ.

ಚೇಳೂರು ವ್ಯಾಪ್ತಿಯ ಗಡಿ ಭಾಗದಲ್ಲಿನ ಎಲ್.ಎಸ್.ಕೋರೆ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಕಳೆದ ರಾತ್ರಿ ಅಪರಿಚಿತ ವ್ಯಕ್ತಿಯನ್ನು ಕರೆತಂದ ಗುಂಪು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿರುವುದಲ್ಲದೆ, ಚಾಕುವಿನಿಂದ ಚುಚ್ಚಿ ಹಗ್ಗದಿಂದ ಬಿಗಿದು ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತ ಕಾಪಾಡಿ ಎಂದು ಅರಚುತ್ತಿದ್ದುದನ್ನು ಗಮನಿಸಿದ ಮಾವಿನಹಳ್ಳಿಯ ನಿವಾಸಿಯೊಬ್ಬರು ಸಮೀಪ ಹೋಗಿ ನೋಡಿದಾಗ ಒದ್ದಾಡುತ್ತಿದ್ದುದು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ತಕ್ಷಣ ಗ್ರಾಮಸ್ಥರು ಆ್ಯಂಬುಲೆನ್ಸ್‍ಗೆ ಕರೆ ಮಾಡಿ ಜಿಲ್ಲಾಸ್ಪತ್ರೆ ಕಳುಹಿಸಿಕೊಟ್ಟು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಚೇಳೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಪ್ರಕಾಶ್, ಗುಬ್ಬಿ ಠಾಣೆ ಇನ್ಸ್‍ಪೆಕ್ಟರ್ ದೀಪಕ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ದೊರೆತ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಗ್ರಾಮಾಂತರ ಠಾಣೆ ಡಿವೈಎಸ್‍ಪಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಕೊಲೆ ನಡೆದಿರುವುದು ಗಮನಿಸಿದರೆ ಹಣಕಾಸಿನ ವಿಚಾರವಾಗಿಯೋ ಅಥವಾ ಅನೈತಿಕ ಸಂಬಂಧದಿಂದಲೋ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಾಗಾಗಿ ತಕ್ಷಣವೇ ಆರೋಪಿಗಳನ್ನು ಬಂಧಿಸಲು ತುರ್ತು ಕ್ರಮಕೈಗೊಳ್ಳಬೇಕೆಂದು ತನಿಖಾಧಿಕಾರಿಗಳಿಗೆ ಎಸ್‍ಪಿಯವರು ಸೂಚನೆ ನೀಡಿದ್ದಾರೆ.

ತಂಡ ರಚನೆ: ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಗುಬ್ಬಿ ವೃತ್ತ ನಿರೀಕ್ಷಕ ದೀಪಕ್, ಚೇಳೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಪ್ರಕಾಶ್ ಹಾಗೂ ನುರಿತ ಸಿಬ್ಬಂದಿಗಳನ್ನೊಳಗೊಂಡ ತಂಡ ನಿಯೋಜನೆ ಮಾಡಲಾಗಿದೆ. ಈ ತಂಡಕ್ಕೆ ಮೊದಲು ಕೊಲೆಯಾಗಿರುವ ವ್ಯಕ್ತಿ ಯಾರು, ಯಾವ ಊರಿನವನು, ಏತಕ್ಕಾಗಿ ಈತನನ್ನು ಕೊಲೆ ಮಾಡಲಾಗಿದೆ ಎಂಬ ಬಗ್ಗೆ ಶೀಘ್ರವಾಗಿ ಪತ್ತೆ ಹಚ್ಚಬೇಕೆಂದು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೆಲವು ಮಾಹಿತಿಗಳು ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ಈ ಸಂಜೆ ಪತ್ರಿಕೆಗೆ ತಿಳಿಸಿವೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )