ಲೋಹಿಯಾ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.23-ರಾಮ ಮನೋಹರ ಲೋಹಿಯಾ ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗಾಂಧಿ ಭವನದಲ್ಲಿಂದು ಆಯೋಜಿಸಲಾಗಿದ್ದ ರಾಮಮನೋಹರರ ಜನ್ಮದಿನಾಚರಣೆ ಅಂಗವಾಗಿ ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಲೋಹಿಯಾ ಅವರು ನಿಧನರಾಗಿ 50 ವರ್ಷ ಕಳೆದಿದೆ. ಅವರ ಭಾಷಣಗಳನ್ನು ಕ್ರೋಢೀಕರಿಸಿ ಪುಸ್ತಕ ಹೊರತಂದಿದ್ದಾರೆ.

ಲೋಹಿಯಾ ಸಮಾಜವಾದ ಪ್ರತಿಪಾದಿಸಿದ್ದರು. ಅವರು ಕಾಂಗ್ರೆಸ್‍ನಲ್ಲಿದ್ದಾಗ ಸಮಾಜವಾದ ವೇದಿಕೆಯನ್ನು ಹುಟ್ಟುಹಾಕಿದ್ದರು ಎಂದು ಹೇಳಿದರು. ವಿದೇಶಿ ಸಿದ್ಧಾಂತಗಳಲ್ಲಿ ರಾಜಕೀಯ ನಡೆಯುತ್ತಿದ್ದ ಕಾಲದಲ್ಲಿ ದೇಶೀಯ ಸಿದ್ದಾಂತ ಪ್ರತಿಪಾದಿಸಿದ ಲೋಹಿಯಾ ಅವರು, ಇಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಮಸ್ಯೆಗಳಿಗೆ ನಿಖರವಾದ ಪರಿಹಾರ ಸೂಚಿಸಿದ್ದರು.

ನಮ್ಮ ಸಾಮಾಜಿಕ ಸ್ಥಿತಿಗತಿಗಳನ್ನು ಲೋಹಿಯಾ ಮತ್ತು ಅಂಬೇಡ್ಕರ್ ಅವರು ಆಳವಾಗಿ ಅರಿತುಕೊಂಡು ಪರಿಹಾರ ಸೂಚಿಸಿದ್ದಾರೆ. ಲೋಹಿಯಾ ಅವರು ಸೂಚಿಸಿರುವ ಪರಿಹಾರಗಳು ಬಹಳಷ್ಟು ಇನ್ನೂ ಜಾರಿಗೆ ಬಂದಿಲ್ಲ. ನಮ್ಮ ಮಧ್ಯೆ ಅವರು ಬದುಕಿಲ್ಲದಿದ್ದರೂ ಅವರ ಸಿದ್ಧಾಂತಗಳನ್ನು ಪಾಲಿಸುವವರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಹಾಗಾಗಿ ಸಮಾಜದಲ್ಲಿ ಸಮಾಜವಾದದ ಕಾರ್ಯಕ್ರಮಗಳು, ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ಹೇಳಿದರು.

ಯುವಕರು ಲೋಹಿಯಾ, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಕುರಿತ ಪುಸ್ತಕಗಳನ್ನು ಓದಿಕೊಳ್ಳಬೇಕು. ಅದರಲ್ಲೂ ರಾಜಕಾರಣಕ್ಕೆ ಬರುವವರು ಇವುಗಳನ್ನು ಓದಿಕೊಂಡಾಗ ಒಳ್ಳೆಯ ಕೆಲಸ ಮಾಡಲು ಸಾಧÀ್ಯವಾಗುತ್ತದೆ ಎಂದರು.

ನಮ್ಮ ಗ್ರಂಥಗಳಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಆದರೆ ಅನುಷ್ಠಾನಗೊಳ್ಳುತ್ತಿಲ್ಲ. ಹೆಣ್ಣನ್ನು ತುಚ್ಚವಾಗಿ ಕಂಡು ಶೋಷಣೆ ಮಾಡಲಾಗುತ್ತಿದೆ. ಕೆಳವರ್ಗದವರಷ್ಟೇ ಅಲ್ಲ, ಮೇಲ್ವರ್ಗದ ಹೆಣ್ಣು ಮಕ್ಕಳನ್ನೂ ಶೋಷಿಸಲಾಗುತ್ತಿದೆ. ಹಾಗಾಗಿ ಲೋಹಿಯಾ ಅವರು ಮಹಿಳಾ ಮೀಸಲಾತಿಯನ್ನು ಪ್ರಸ್ತಾಪಿಸಿದ್ದರು. ಅದು ಈವರೆಗೂ ಸಂಸತ್ ಮತ್ತು ವಿಧಾನಸಭೆಯಲ್ಲಿ ಜಾರಿಯಾಗಿಲ್ಲ ಎಂದರು.

ವರ್ಗಗಳಿಗೆ ಚಲನಶೀಲನೆ ಇದೆ. ಆದರೆ ಜಾತಿ ವ್ಯವಸ್ಥೆಗೆ ಚಲನಶೀಲತೆ ಇಲ್ಲ. ಲಿಂಗಭೇದ ಮತ್ತು ಜಾತಿಭೇದ ತೊಲಗದ ಹೊರತು ಸಮಾಜದ ಅಭಿವೃದ್ದಿ ಸಾಧ್ಯವಿಲ್ಲ ಎಂಬುದು ಲೋಹಿಯಾ ಅವರ ಆಲೋಚನೆಯಾಗಿತ್ತು. ಲೋಹಿಯಾ ಅವರ ಪ್ರೇರಣೆಯಿಂದಾಗಿಯೇ ಭೂಸುಧಾರಣಾ ಕಾಯ್ದೆಗೆ ಕಾರಣವಾದ ಕಾಗೋಡು ಚಳವಳಿ ನಡೆಯಿತು ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, 1951ರಲ್ಲಿ ಗೇಣಿದಾರರ ಕಾಗೋಡು ಚಳವಳಿ ನಡೆಯಿತು. ಭೂ ಮಾಲೀಕರು ಮೂರೂವರೆ ಸೇರಿನ ಅಳತೆಯಲ್ಲಿ ಗೇಣಿ ಪಾಲನ್ನು ಅಳೆದುಕೊಳ್ಳುತ್ತಿದ್ದರು. ತಮಗೆ ಬೇಕಾದಾಗ ರೈತರನ್ನು ಕೆಲಸಕ್ಕೆ ಕರೆದು ದುಡಿಸಿಕೊಳ್ಳುತ್ತಿದ್ದರು.

ಹಿತ್ತಲ ಬಾಗಿಲಿನಲ್ಲಿ ಊಟ ಹಾಕಿ, ನಂತರ ಎಂಜಲು ಗೋಮಯವನ್ನು ಅವರ ಕೈಯಲ್ಲಿಂದಲೇ ಸಾರಿಸುತ್ತಿದ್ದರು. ಇದೆಲ್ಲದರ ವಿರುದ್ದ ರೈತರು ಪ್ರಶ್ನಿಸಿದರು. ಗೇಣಿ ಪಾಲು ನೀಡದೆ ಪ್ರತಿಭಟಿಸಿದರು. ಇದಕ್ಕೆ ಪ್ರತಿಯಾಗಿ ಭೂಮಾಲೀಕರು ಹಿಡುವಳಿದಾರರಿಗೆ ವ್ಯವಸಾಯ ಮಾಡಲು ಭೂಮಿ ಕೊಡಲಿಲ್ಲ.

ಆಗ ಕಡಿದಾಳು ಶಾಮಣ್ಣ, ಶಾಂತವೀರಗೌಡ ಮತ್ತಿತರರು ಸಮಾಜವಾದಿ ಚಿಂತನೆಯೊಂದಿಗೆ ಕಾಗೋಡು ಚಳವಳಿ ಆರಂಭಿಸಿದರು. ಚಳವಳಿ ನಡೆದು 20 ವರ್ಷಗಳ ನಂತರ ದೇವರಾಜ ಅರಸು ಕಾಲದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಯಿತು ಎಂದು ಸ್ಮರಿಸಿದರು.

ಮೀಸಲಾತಿಯ ಸೌಲಭ್ಯ ಪಡೆದ ಹಿಂದುಳಿದ ಮತ್ತು ದಲಿತ ಫಲಾನುಭವಿಗಳು ತಮ್ಮ ಊರಿಗೆ ಹೋಗಿ ಹಳ್ಳಿಗಳಲ್ಲಿನ ತಮ್ಮವರ ಜೀವನ ಸುಧಾರಣೆ ಮಾಡುವ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ ಅವರು, ಲೋಹಿಯಾ ಅವರು ಅಹಿಂಸಾತ್ಮಕ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದರು. ಅವರ ಬೆಂಬಲದಿಂದಾಗಿಯೇ ಕಾಗೋಡು ಹೋರಾಟ ಯಶಸ್ವಿಯಾಯಿತು ಎಂದು ಹೇಳಿದರು.

ಜಾತಿ ವಿನಾಶವಾಗದ ಹೊರತು ಸಮಾಜದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಜಾತಿಯ ಸ್ಥಿತಿಗತಿಗಳ ಬಗ್ಗೆ ಲೋಹಿಯಾ ಅವರು ಆಳವಾದ ತಿಳುವಳಿಕೆ ಹೊಂದಿದ್ದರು. ಅಷ್ಟೇ ಅಲ್ಲದೆ, ಕೈಗಾರಿಕೆ ಮತ್ತು ಆರ್ಥಿಕತೆ ಬಗ್ಗೆಯೂ ಅವರಿಗೆ ಹೆಚ್ಚಿನ ಅರಿವಿತ್ತು. ದೊಡ್ಡ ದೊಡ್ಡ ಕೈಗಾರಿಕೆಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಸಣ್ಣ ಕೈಗಾರಿಕೆಗಳಿಂದಲೇ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯ ಎಂದು ಅವರು ನಂಬಿದ್ದರು.

ಇಂದು ದೊಡ್ಡ ದೊಡ್ಡ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಸಣ್ಣಪುಟ್ಟ ಕೈಗಾರಿಕೆಗಳೇ ಉದ್ಯೋಗ ನೀಡುತ್ತಿವೆ ಎಂದು ಕಾಗೋಡು ಹೇಳಿದರು. ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಭೈರತಿ ಸುರೇಶ್, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್, ನಟರಾಜ್ ಹುಳಿಯಾರ್, ನೆಲಸಿರಿ ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜ್, ಚಿಂತಕರಾದ ಕೆ.ದೊರೈರಾಜ್,ಪುಸ್ತಕ ಸಂಪಾದಕ ಎಸ್.ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )