ಬಿಗ್ ನ್ಯೂಸ್ : ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಿಸಿದ ಬಿಜೆಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಮಾ. 23 : ಜಿದ್ದಾಜಿದ್ದಿನ ಕಣವಾಗಿರುವ ಸಕ್ಕರೆ ಜಿಲ್ಲೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಗೆ ಬಿಜೆಪಿ ಬೆಂಬಲ ಘೋಷಿಸಿದೆ.

ಈ ಮೂಲಕ ದೋಸ್ತಿ ಸರ್ಕಾರಕ್ಕೆ ಜೆಡಿಎಸ್ ನ ಭದ್ರಕೋಟೆಯಲ್ಲೇ ಟಕ್ಕರ್ ನೀಡುವುದರ ಜೊತೆಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿದೆ.

ಇದರೊಡನೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ನೇರ ಹಣಾಹಣಿ ನಡೆಯುವುದು ಖಚಿತವಾಗಿದೆ. ಶನಿವಾರ ನವದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಕಾರ್ಯದರ್ಶಿ ಜೆ.ಪಿ ನಡ್ಡಾ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಇದರಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಅಚ್ಚರಿ ಎಂಬಂತೆ ಬೆಂಗಳೂರಿನ ‌ವೈಟ್ ಪೀಲ್ಡ್ ನ ಬಿಬಿಎಂಪಿಯ ಸದಸ್ಯ ಮುನಿಸ್ವಾಮಿಗೆ ಟಿಕೆಟ್ ನೀಡಲಾಗಿದೆ.

ಈ ಕ್ಷೇತ್ರದ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣ ಸ್ವಾಮಿ ಹಾಗೂ ಚಿ.ನಾ. ರಾಮೂಗೆ ಭಾರೀ ನಿರಾಶೆಯಾಗಿದೆ.

ಇದಕ್ಕೆ ಮುನ್ನ ಡಾ. ಸಿದ್ದರಾಮಯ್ಯ ಅವರನ್ನು ಮಂಡ್ಯದಿಂದಕಣಕ್ಕಿಳಿಸಲು ತೀರ್ಮಾನಿಸಿದ್ದ ಬಿಜೆಪಿ ಕಡೆ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿಕೊಂಡಿದೆ. ಸುಮಲತಾ ಅವರನ್ನು ಬೆಂಬಲಿಸಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಬಿಜೆಪಿ ನಿರ್ಧರಿಸಿದೆ.

ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೊಪ್ಪಳ, ರಾಯಚೂರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಲ್ಲ.

ರಂಗೇರಿದ ಮಂಡ್ಯ :
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಫರ್ಧೆಯಿಂದಾಗಿ ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯ ಜಿಲ್ಲೆ ಮುಂದಿನ ದಿನಗಳಲ್ಲಿ ಭಾರೀ ಹಣಾಹಣಿಗೆ ವೇದಿಕೆಯಾಗಲಿದೆ.

ಈಗಾಗಲೇ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ದಿ.ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಆಖಾಡಕ್ಕೀಳಿದಿದ್ದಾರೆ. ಇದೀಗ ಬಿಜೆಪಿ ಸುಮಲತಾ ಗೆ ಬಹಿರಂಗವಾಗಿಯೇ ಬೆಂಬಲ ಘೋಷಣೆ ಮಾಡಿರುವುದರಿಂದ ಇಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ.

ಕಾಂಗ್ರೆಸ್ ನ ಕೆಲವು ನಾಯಕರು ಸುಮಲತಾಗೆ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ವಿಚಿತ್ರ ಪರಿಸ್ಥಿತಿ ಇದೆ.

ಇಲ್ಲ ಜೆಡಿಎಸ್ ಜೊತೆ ಕಾಂಗ್ರೆಸ್ ನಾಯಕರು ವೇದಿಕೆ ಹಂಚಿಕೆಕೊಂಡಿಲ್ಲ.
ನನಗೆ ಬೆನ್ನಿಗೆ ಚೂರಿ ಹಾಕಿದವರ ಮನವೊಲಿಸಿ ಕೈ ಜೋಡಿಸುವುದಿಲ್ಲ‌ ಎಂದು ಕುಮಾರಸ್ವಾಮಿ ಹೇಳಿರುವುದು ಜಿಲ್ಲೆಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ಒಂದೆಡೆ ಬಿಜೆಪಿ ಬೆಂಬಲ ,‌ಇನ್ನೊಂದೆಡೆ ಕಾಂಗ್ರೆಸ್ ನ ಆಂತಾರೀಕ ಬೆಂಬಲ ಸುಮಲತಾ ಗೆ ಸಿಕ್ಕಿರುವುದರಿಂದ ಮಂಡ್ಯ ರಣಕಣ ಮುಂದಿನ ದಿನಗಳಲ್ಲಿ ರೋಚಕತೆ ಪಡೆದುಕೊಳ್ಳಲಿದೆ.

# ಇನ್ನೂ ಕುತೂಹಲ :
ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಗೆ ಇಲ್ಲವೇ ಅವರ ಪುತ್ರಿ ನಿಶಾ ಅವರನ್ನು ಕಣಕ್ಕೀಳಿಸುವ ಬಗ್ಗೆ ಗೊಂದಲ ಮುಂದುವರಿದಿದೆ.

ಇದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.  ರಾಯಚೂರು, ಕೊಪ್ಪಳ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಆಕಾಂಕ್ಷೆಗಳು ಹೆಚ್ಚಾಗಿರುವ ಕಾರಣ,ಘೋಷಣೆ ಮಾಡಿಲ್ಲ.

ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗೆ ಮಾಡಿತ್ತು. ಆದರೆ ಈ ಬಾರಿಯೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ಗೆ ಟಿಕೆಟ್ ನೀಡಿಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಲ್ಲಿ ನಿಲ್ಲುತ್ತಾರೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

1.ಕೋಲಾರ- ಮುನಿಸ್ವಾಮಿ
2. ಮಂಡ್ಯ- ಸುಮಲತಾಗೆ ಬೆಂಬಲ
3. ಕೊಪ್ಪಳ-ಪ್ರಕಟವಾಗಿಲ್ಲ
4. ಬೆಂಗಳೂರು ಗ್ರಾಮಾಂತರ-ಪ್ರಕಟವಾಗಿಲ್ಲ
5. ಬೆಂಗಳೂರು ದಕ್ಷಿಣ-ಪ್ರಕಟವಾಗಿಲ್ಲ
6.ರಾಯಚೂರು-ಪ್ರಕಟವಾಗಿಲ್ಲ
7.ಚಿಕ್ಕೋಡಿ- ಪ್ರಕಟವಾಗಿಲ್ಲ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin