ಸಾವಿನ ಕಟ್ಟಡದಲ್ಲಿ ನಿಲ್ಲದ ಮರಣ ಮೃದಂಗ, ಮೃತರ ಸಂಖ್ಯೆ 16ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ,ಮಾ.23: ನಗರದ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಕುಮಾರೇಶ್ವರ ನಗರದ ಕ್ರಾಸ್‍ನಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿತಕ್ಕೆ ಈವರೆಗೆ ಸಾವಿನ ಸಂಖ್ಯೆ ಹದಿನಾರಕ್ಕೆ ಏರಿಕೆಯಾಗಿದ್ದು, ಅವಶೇಷಗಳಡಿ ಸಿಲುಕಿರುವ ಮತ್ತಷ್ಟು ಜನರ ರಕ್ಷಣೆಗೆ ಕಾರ್ಯಾಚರಣೆ ಪಡೆ ಹರಸಾಹಸ ಮಾಡುತ್ತಿದ್ದರೆ, ಅವರ ಸಂಬಂಧಿಕರು ತಮ್ಮವರು ಬದುಕಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಎಂಟು ವರ್ಷದ ಮಗು ದಿವ್ಯ, ಉಣಕಲ್, ತಂದೆ ಮಹೇಶ್ವರಯ್ಯ ಹಿರೇಮಠ, ಮಗ ಆಶೀಶ್ ಹಿರೇಮಠ ಸೇರಿ ಸಾವನ್ನಪ್ಪಿದ್ದವರ ಸಂಖ್ಯೆ ಮೂರನೇ ದಿನಕ್ಕೆ ಹದಿನಾರಕ್ಕೇರಿದ್ದು, ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಮಾಹಿತಿಯಿದ್ದು, ಐದನೇ ದಿನವೂ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಘಟನೆಯಲ್ಲಿ ಸಾವನ್ನಪ್ಪಿದವರನ್ನು ಸಲೀಂ ಮಕಾನದಾರ, ತಂದೆ ಮಹೇಶ್ವರಯ್ಯ ಹಿರೇಮಠ, ಮಗ ಆಶೀಶ್ ಹಿರೇಮಠ, ಮೆಹಬೂಬಸಾಬ ದೇಸಾಯಿ, ಮಾಬುಸಾಬ ರಾಯಚೂರ, ಅಸ್ಲಂ ಶೇಕ್, ದಿವ್ಯಾ ಉಣಕಲ್, ಸಂಗಮೇಶ ಮಾನ್ವಿ, ಕಮಲಾಕ್ಷಿ ಮುಧೋಳಮಠ, ಇಸ್ಮಾಯಿಲ್ ಸಾಬ ಟಕ್ಕೇದ, ಗರ್ಜಪ್ಪ ಲಕ್ಕುಂಡಿ, ಅನುಪ್ ಕುಡತಕರ್, ದ್ರಾಕ್ಷಾಯಣಿ ಶಿವಲಿಂಗಪ್ಪ ಮತ್ತೂರ, ಸುಬ್ಬಣ್ಣ ನೀರಲಕಟ್ಟಿ ಎಂದು ಗುರುತಿಸಲಾಗಿದೆ.

ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ನಡೆಸುತ್ತಿದೆ.

ಅಗ್ನಿಶಾಮಕದ ಸಿಬ್ಬಂದಿಯಂತೂ ತಮ್ಮ ಜೀವ ಒತ್ತೆಯಿಟ್ಟು ಸುರಂಗ ಕೊರೆದು ಒಳ ನುಗ್ಗಿ ಹಲವರ ಪ್ರಾಣ ರಕ್ಷಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಿನ್ನೆ ಅವರ ಸತತ ಪರಿಶ್ರಮದಿಂದಾಗಿ ನಾಲ್ವರು ಪವಾಡ ರೀತಿಯಲ್ಲಿ ಬದುಕಿ ಬಂದಿದ್ದರು.

ಈವರೆಗೆ 70ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ಇನ್ನೂ ಹಲವರು ಇದ್ದು ತಮ್ಮವರ ಸುರಕ್ಷಿತ ಬರುವಿಕೆಗೆ ಎದುರು ನೊಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮವರು ಮರಳುವುದು ಅನುಮಾನ ಎಂದು ಉಸಿರು ಬಿಗಿ ಹಿಡಿದುಕೊಂಡೆ ಎದುರು ನೋಡುತ್ತಿದ್ದಾರೆ.  ಸ್ಥಳದಲ್ಲಿರುವ ಅನೇಕರು ತಮ್ಮವರು ಕಾಣೆಯಾಗಿದ್ದಾರೆ. ಅವರನ್ನು ಹೇಗಾದರೂ ಮಾಡಿ ದಯವಿಟ್ಟು ಹುಡುಕಿಕೊಡಿ ಸರ್ ಎಂದು ಅಳಲುತೊಡಿಕೊಳ್ಳುವ ದೃಶ್ಯ ಮನಕಲುಕುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin