ಭಗತ್‍ಸಿಂಗ್, ರಾಜ್‍ಗುರು, ಸುಖದೇವ್ ಅವರ ತ್ಯಾಗ-ಬಲಿದಾನ ಸ್ಮರಿಸಿದ ಗಣ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.23- ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರಪುರುಷ ಭಗತ್‍ಸಿಂಗ್, ಶಿವರಾಮ್ ಹರಿ ರಾಜಗುರು ಮತ್ತು ಸುಖದೇವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಇಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರು ತೋರಿದ ಕೆಚ್ಚೆದೆಯ ಹೋರಾಟ ಮತ್ತು ಬಲಿದಾನವನ್ನು ಮೋದಿ ಟ್ವೀಟರ್‍ನಲ್ಲಿ ಕೊಂಡಾಡಿದ್ದಾರೆ. ಇವರ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇಂದಿಗೆ 88 ವರ್ಷಗಳ ಹಿಂದೆ ಮಾರ್ಚ್ 23, 1931ರಂದು ಲಾಹೋರ್ ಜೈಲಿನಲ್ಲಿ ಈ ಮೂವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಭಗತ್‍ಸಿಂಗ್ ನೇಣುಗಂಬಕ್ಕೇರಿದಾಗ ಅವರ ವಯಸ್ಸು 23 ವರ್ಷಗಳು. ಪಂಜಾಬ್ ಪ್ರಾಂತ್ಯದ ಆಗಿನ ಫೈಸ್ಲಾಬಾದ್ ಜಿಲ್ಲಾ ಬಾಂಗಾ ಗ್ರಾಮದಲ್ಲಿ 1907ರಲ್ಲಿ ಭಗತ್ ಸಿಂಗ್ ಜನಿಸಿದ್ದರು.

ಆಂಗ್ಲರ ವಿರುದ್ಧ ಬಂಡಾಯದ ಬಾವುಟ ಮೊಳಗಿಸಿದ್ದ ಭಗತ್‍ಸಿಂಗ್ ಅವರ ವೀರವಾಣಿ ಇಂದಿಗೂ ಪ್ರಸ್ತುತ. ಬಂಡಾಯವು ಕೇವಲ ಕ್ರಾಂತಿಯಲ್ಲ, ಅದು ದುಷ್ಟರ ಅಧಿಪತ್ಯವನ್ನು ಅಂತ್ಯಗೊಳಿಸುವ ಮಹಾಕ್ರಾಂತಿ ಎಂದು ಅವರು ಗುಡುಗಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಗಳನ್ನು ದಮನ ಮಾಡುವುದರಿಂದ ಅವರ ಉದಾತ್ತ ಧ್ಯೇಯಗಳನ್ನು ಕೊಲ್ಲಲು ಸಾಧ್ಯವಿಲ್ಲ.

ನಾನೊಬ್ಬ ವಿಚಿತ್ರ ವ್ಯಕ್ತಿ. ಜೈಲಿನಲ್ಲಿಯೂ ಕೂಡ ನಾನು ಸ್ವತಂತ್ರದ ಹಕ್ಕಿ ಎಂದು ಅವರು ಹೇಳಿದ್ದರು. ಬ್ರಿಟಿಷ್ ದಬ್ಬಾಳಿಕೆ ವಿರುದ್ಧ ಸಿಡಿದ್ದಾದ್ದರು. ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ಈ ಮೂವರನ್ನು ಬಾಂಬ್ ದಾಳಿ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಈ ಮೂವರು ವೀರಾಗ್ರಣಿಗಳ ಗೌರವಾರ್ಥ ಪ್ರತಿ ವರ್ಷ ಮಾ.23 ರಂದು ಪಂಜಾಬ್‍ನಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )