ಸಚಿವ ಸಿ.ಎಸ್.ಶಿವಳ್ಳಿಗೆ ಕಣ್ಣೀರ ವಿದಾಯ

ಈ ಸುದ್ದಿಯನ್ನು ಶೇರ್ ಮಾಡಿ

ಕುಂದಗೋಳ,ಮಾ.23-ತೀವ್ರ ಹೃದಯಾಘಾತದಿಂದ ನಿನ್ನೆ ಹಠಾತ್ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮ ಎರೆಗುಪ್ಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಹಾಲುಮತ ಸಂಪ್ರದಾಯದಂತೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಪಟ್ಟಣದ ಶಿವಾನಂದಮಠದಲ್ಲಿ ಸಚಿವ ಸಿ.ಎಸ್. ಶಿವಳ್ಳಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಅವರ ಬಂಧುಗಳು, ಅಭಿಮಾನಿಗಳು, ಸಾರ್ವಜನಿಕರು ಸಾಲಾಗಿ ನಿಂತು ಶಿವಳ್ಳಿಯವರ ಅಂತಿಮ ದರ್ಶನ ಪಡೆದರು.

ಶಿವಾನಂದಮಠದ ಬಸವರಾಜ ಸ್ವಾಮೀಜಿ, ಕಲ್ಯಾಣಪುರದ ಬಸವಣ್ಣಜ್ಜನವರು ಮತ್ತು ಹನಮನಹಳ್ಳಿ ಶಿವಬಸವ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಅಂತಿಮ ನಮನ ಸಲ್ಲಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಎನ್.ಎಚ್. ಕೋನರಡ್ಡಿ, ಶಾಸಕ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಸದಸ್ಯ ಉಮೇಶ ಹೆಬಸೂರು, ಶಾಂತವ್ವ ಗುಜ್ಜಳ, ನಾಗರಾಜ ಛಬ್ವಿ, ಗಂಗಾಧರ ಕುನ್ನೂರ, ಬಾಬಣ್ಣಾ ಧಾರವಾಡಶೆಟ್ಟರ, ಅಂದಾನೆಪ್ಪ ಉಪ್ಪಿನ, ಶಿವಾನಂದ ಬೆಂತೂರ, ಹರೀಶ್ ಲಕ್ಷ್ಮೇಶ್ವರ, ದಯಾನಂದ ಕುಂದೂರು, ಅಪ್ಪಣ್ಣ ಹಿರೇಗೌಡ್ರ, ಸುರೇಶ ಗಂಗಾಯಿ ಮತ್ತು ಪಟ್ಟಣ ಪಂಚಾಯ್ತಿ ಸರ್ವ ಸದಸ್ಯರು ಮತ್ತಿತರರು ಕೂಡಾ ಅಂತಿಮ ನಮನ ಸಲ್ಲಿಸಿದರು.

ಶಿವಾನಂದ ಮಠದಿಂದ ಅವರ ಸ್ವಗ್ರಾಮಕ್ಕೆ ಪ್ರಾರ್ಥೀವ ಶರೀರದ ಅಂತಿಮಯಾತ್ರೆ ನಡೆಸಲಾಗಿದ್ದು, ಮಾರ್ಗದುದ್ದಕ್ಕು ರಸ್ತೆಯ ಅಕ್ಕಪಕ್ಕಗಳಲ್ಲಿ ನಿಂತ ಜನ ತಮ್ಮ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು.

ಶಿವಳ್ಳಿಯವರ ಹುಟ್ಟೂರು ಎರೆಗುಪ್ಪಿಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಅವರ ನಿವಾಸದ ಎದುರು ಪಾರ್ಥೀವ ಶರೀರ ಕಂಡ ಗ್ರಾಮಸ್ಥರು, ಸಂಬಂಧಿಕರು ಬಿಕ್ಕಿ ಬಿಕ್ಕಿ ಅತ್ತರು.

ಶಿವಳ್ಳಿಯವರ ಅಂತ್ಯಕ್ರಿಯೆಯನ್ನು ಅವರ ಜಮೀನಿನಲ್ಲಿ ಅಂದರೆ ಅವರ ತಂದೆ, ತಾಯಿ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಯಿತು.

# ಸಿಎಂ ಸಂತಾಪ:
ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ಶಿವಳ್ಳಿ ಅವರು, ಉಪಸ್ಥಿತರಿದ್ದು, ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಅವರ ಹಠಾತ್ ನಿಧನ ತೀವ್ರ ಆಘಾತ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಅವರಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ಮೊನ್ನೆ ಸಂಜೆ ಧಾರವಾಡಕ್ಕೆ ಭೇಟಿ ನೀಡಿದ್ದಾಗ ಕಟ್ಟಡ ಕುಸಿತ ಸ್ಥಳದಲ್ಲಿ ಕೈಗೊಂಡಿದ್ದ ರಕ್ಷಣಾ ಕಾರ್ಯಗಳ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾಗಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಜನಾನುರಾಗಿಯಾಗಿ, ಸಮಾಜಮುಖಿ ಕೆಲಸ ಮಾಡುತ್ತಿದ್ದ ಶಿವಳ್ಳಿ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತನು ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

# ಶಿವಳ್ಳಿಗೆ ಗಣ್ಯರ ಸಂತಾಪ :
ಹುಬ್ಬಳ್ಳಿ,ಮಾ.23- ನಿನ್ನೆ ತೀವ್ರ ಹೃದಯಾಘಾತದಿಂದ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿ.ಎಸ್.ಶಿವಳ್ಳಿಯವರು ಗ್ರಾಮೀಣ ಭಾಗದಿಂದ ಬಂದು ನಿಷ್ಠೆ, ದಕ್ಷತೆ, ಸಮರ್ಥ ನಾಯಕರಾಗಿ ರಾಜಕೀಯದಲ್ಲಿ ಬೆಳೆದಿದ್ದರು ಎಂದು ಮಾಜಿ ಸಚಿವೆ ಉಮಾಶ್ರೀ ಸ್ಮರಿಸಿದ್ದಾರೆ.

ಶಿವಳ್ಳಿಯವರು ನನ್ನನ್ನು ಅಕ್ಕ ಎಂದೇ ಕರೆಯುತ್ತಿದ್ದರು. ಅವರನ್ನು ನಂಬಿದ ಬಡ ಕುಟುಂಬಗಳಿಗೆ ಹಾನಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಲಿ ಎಂದು ಮನವಿ ಮಾಡಿದರು. ಶಿವಳ್ಳಿ ಅವರ ಅಗಲಿಕೆ ನಮ್ಮೆಲ್ಲರಿಗೂ ನೋವು ತಂದಿದೆ. ಅವರು ಸಾಧು ಹಾಗೂ ಸಂಪನ್ನ ರಾಜಕಾರಣಿ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಮೃತರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ತೀವ್ರ ನಷ್ಟವಾಗಿದೆ. ಸಿ.ಎಸ್.ಶಿವಳ್ಳಿಯವರು ಸಚಿವರಷ್ಟೇ ಅಲ್ಲ; ಒಬ್ಬ ಹೋರಾಟಗಾರರಾಗಿದ್ದರು ಎಂದು ಹೇಳಿದರು. ಬಹಳ ಶ್ರಮದಿಂದ ಮೇಲೆ ಬಂದ ಶಿವಳ್ಳಿಯವರ ನಿಧನ ನೋವು ತಂದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಅವರ ಸಾವಿನ ನೋವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದರು. ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಶಿವಳ್ಳಿಯವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದರು.

ಆರ್.ವಿ.ದೇಶಪಾಂಡೆ, ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಪ್ರಭಾಕರ್ ಕೋರೆ, ಶಾಸಕ ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ್, ವಿ.ಪಿ.ಲಿಂಗನಗೌಡರ್, ಶಂಕರ ಪಾಟೀಲ ಮುನೇಕೊಪ್ಪ, ಎಂ.ಎ.ಹಿಂಡಸಗೇರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )