ಡೈರಿ ಪ್ರಕರಣದಲ್ಲಿ ಬಿಎಸ್ವೈಗೆ ಬಿಗ್ ರಿಲೀಫ್, ಕಾಂಗ್ರೆಸ್ ಗೆ ಭಾರೀ ಮುಖಭಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಮಾ.23 : ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ನಾಯಕರಿಗೆ ಹಪ್ತ ನೀಡಿದ್ದಾರೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಡೈರಿ ನಕಲಿ ಎನ್ನುವ ಮೂಲಕ ಆದಾಯ ತೆರಿಗೆ ( ಐಟಿ)ಇಲಾಖೆ ಬಿ.ಎಸ್.ವೈಗೆ ಕ್ಲೀನ್ ಚಿಟ್ ನೀಡಿದೆ.

ನಿಯತ ಕಾಲಿಕೆಯೊಂದರಲ್ಲಿ ಪ್ರಕಟವಾಗಿದ್ದ ಡೈರಿ ವಿವರಗಳು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.  ಡೈರಿ ವಿವಾದದ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ ಶುಕ್ರವಾರ ಸ್ಪಷ್ಟೀಕರ ನೀಡಿದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಕರ್ನಾಟಕ – ಗೋವಾ[ತನಿಖೆ] ವಿಭಾಗದ ಮಹಾ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಅವರು, ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಡೈರಿ ನಕಲಿ ಎಂಬ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿದೆ ಎಂದರು.

ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳೆಲ್ಲ ನಕಲಿ. ಒಂದು ಐಟಿ ದಾಳಿಯಲ್ಲಿ ನಮ್ಮ ಸಿಬ್ಬಂದಿಗೆ ಕೆಲ ದಾಖಲೆಗಳು ಸಿಕ್ಕಾಗ, ಅವನ್ನೆಲ್ಲ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಆ ದಾಖಲೆಗಳೆಲ್ಲ ಫೋಟೋ ಕಾಪಿಗಳು ಆಗಿದ್ದರಿಂದ ಹೈದರಾಬಾದ್ ಸಿಎಸ್‍ಎಫ್‍ಎಲ್ ಸತ್ಯಾಂಶ ಕಂಡು ಹಿಡಿಯಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ ಎಂದು ಸ್ಪಷ್ಟಪಡಿಸಿದರು.

ಶುಕ್ರವಾರ ಬಿಡುಗಡೆ ಮಾಡಿರುವ ದಾಖಲೆಗಳ ಮೊದಲ ಪುಟ ನಮಗೆ ಸಿಕ್ಕಿರಲಿಲ್ಲ. ಹಾಗಾಗಿ ಹಣ ವರ್ಗಾವಣೆಯ ಬಗ್ಗೆ ಬರೆದಿರುವ ಆ ಪುಟಗಳು ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಖಚಿತಪಡಿಸಿದರು.

ಡೈರಿಯಲ್ಲಿದ್ದ ಯಡಿಯೂರಪ್ಪ ಅವರ ಕೈ ಬರಹವನ್ನು ಹೈದರಾಬಾದ್ ನ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಮೂಲ ದಾಖಲೆಗಳಿಲ್ಲದೇ ಇದು ಯಾರ ಕೈ ಬರಹ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ ವಾಪಸ್ ಕಳುಹಿಸಿದೆ.

ಅಂತಿಮವಾಗಿ ಇದು ನಕಲಿ ಡೈರಿ ಎನ್ನುವ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿದೆ ಎಂದರು. ಇದು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಡೈರಿಯಲ್ಲ.

ಇದನ್ನು ನಕಲು ಮಾಡಲಾಗಿದ್ದು, ಇಂತಹ ದಾಖಲೆಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ತನಿಖೆ ನಡೆಸಲಿ ಎಂದು ಇಲಾಖೆ ಮೇಲೆ ಪ್ರಭಾವ ಬೀರುವ ಪ್ರಯತ್ನವೂ ಸಹ ಇದರ ಹಿಂದೆ ಅಡಗಿರಬಹುದು. ಆದರೆ ನಾವು ಇಂತಹ ಯತ್ನಗಳಿಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು.

ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ತಿಳಿಸಿದರು.

ನಕಲಿ ದಾಖಲೆಗಳನ್ನು ಮುಂದಿಟ್ಟುಕೊಂಡು ವರದಿ ಮಾಡಿದ ಮಾಧ್ಯಮ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಡೈರಿಯಲ್ಲಿ ನಮೂದಿಸಿರುವುದು ಸಾಕ್ಷಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ.

ಹೀಗಾಗಿ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸದು ಎಂದು ಸ್ಪಷ್ಪಪಡಿಸಿದರು. ಪ್ರಾಥಮಿಕ ವರದಿ ಪ್ರಕಾರ ಡೈರಿ ನಕಲಿಯಾಗಿದೆ. ಹೆಚ್ಚಿನ ಪರಿಶೀಲನೆಗಾಗಿ ಅದನ್ನು ಹೈದರಾಬಾದ್ನ ಸಿಎಫ್ಎಸ್ಎಲ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಿಎಸ್ಎಫ್ಎಲ್ನಿಂದ ವರದಿ ಇನ್ನಷ್ಟೇ ಬರಬೇಕಿದೆ ಎಂದರು.

ಈ ಡೈರಿಯ ಪುಟ, ಸಚಿವ ಡಿ.ಕೆ.ಶಿವಕುಮಾರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕಿತ್ತು. ಅದು ಯಡಿಯೂರಪ್ಪನವರಿಗೆ ಸೇರಿದ್ದು ಎಂದು ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ ಅದೊಂದು ಝೆರಾಕ್ಸ್‌ ಪ್ರತಿಯಾಗಿದ್ದು, ಅದರ ಮೂಲ ಪ್ರತಿ ಇಲಾಖೆಗೆ ದೊರೆತಿಲ್ಲ.

‘ಬಿ.ಎಸ್‌.ಯಡಿಯೂರಪ್ಪ 1800 ಕೋಟಿ ರೂ. ಹಣವನ್ನು ಅಂದಿನ ಬಿಜೆಪಿ ಕೇಂದ್ರ ನಾಯಕರುಗಳಿಗೆ, ಕೇಂದ್ರ ಸಮಿತಿಗೆ ಮತ್ತು ನ್ಯಾಯಮೂರ್ತಿಗಳು, ನ್ಯಾಯವಾದಿಗಳಿಗೆ ಸಂದಾಯ ಮಾಡಿದ್ದಾರೆ’ ಎಂದು ನಿಯತಕಾಲಿಕೆಯೊಂದು ವರದಿ ಮಾಡಿತ್ತು.

ಅದು 2009ರ ಶಾಸಕರ ಡೈರಿ ಪುಟವಾಗಿದ್ದು, ಕೆಲವು ವೈಯಕ್ತಿಕ ಹೆಸರುಗಳು ಸೇರಿದಂತೆ ಅಂಕಿ-ಸಂಖ್ಯೆಗಳನ್ನು ಹೊಂದಿತ್ತು. ಅದರ ಮೂಲ ಪ್ರತಿ ಲಭಿಸಿಲ್ಲ. ಅಲ್ಲದೇ ಹಣ ವರ್ಗಾವಣೆ ಮಾಡಿದ ಅವಧಿಯನ್ನು ಸಹ ಡಿ.ಕೆ. ಶಿವಕುಮಾರ್ ಆದಾಯ ತೆರಿಗೆ ಇಲಾಖೆಗೆ ತಿಳಿಸಿಲ್ಲ. ಆದರೆ ಡೈರಿ ಮಾಹಿತಿ ರಾಜಕೀಯವಾಗಿ ಆರೋಪ – ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನದಲ್ಲಿದ್ದ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin