ಬಾಕಿ ಇರುವ 5 ಕ್ಷೇತ್ರಗಳಿಗೆ ಇಂದು ಸಂಜೆ ಅಭ್ಯರ್ಥಿಗಳ ಘೋಷಣೆ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.24- ಬಾಕಿ ಇರುವ ಐದು ಲೋಕಾಸಭಾ ಕ್ಷೇತ್ರಗಳಿಗೆ ಸಂಜೆ ಪಟ್ಟಿ ಪ್ರಕಟವಾಗುವ ಸಂಭವವಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಯಾವ ಕಾರಣಕ್ಕಾಗಿ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಎಂಬುದು ತಮಗೂ ಕೂಡ ತಿಳಿದಿಲ್ಲ. ನಮಗಿರುವ ಮಾಹಿತಿ ಪ್ರಕಾರ ಸಂಜೆಯೊಳಗೆ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ವರಿಷ್ಠರಿಗೆ ನೀಡಲಾಗಿತ್ತು. ಕೆಲವು ಕಾರಣಗಳಿಗಾಗಿ ಕೆಲವು ಕ್ಷೇತ್ರಗಳಿಗೆ ಬಿಡುಗಡೆ ಮಾಡದಿರಬಹುದು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಗೊಂದಲ ಇರುವ ಕಡೆ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ. ನಾಮಪತ್ರ ಸಲ್ಲಿಕೆಯಾದ ನಂತರ ಯಾವ ಯಾವ ಜಿಲ್ಲೆಯಲ್ಲಿ ಸಮಸ್ಯೆ ಇದೆಯೋ ಅಂತಹ ಕಡೆ ಮನವೊಲಿಸುವ ಕಸರತ್ತನ್ನು ನಾನು ಸೇರಿದಂತೆ ಜಿಲ್ಲಾ ಮುಖಂಡರು ಮಾಡುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಶ್ರಮಿಸಲಿದ್ದೇವೆ ಎಂದರು.

ವಿವಿಧ ನಾಯಕರ ಭೇಟಿ:  ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸದಲ್ಲಿ ಇಂದು ಬೆಳಗೆನಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದು ವಿವಿಧ ನಾಯಕರು ಭೇಟಿ ನೀಡಿದ್ದರು. ರಾಜ್ಯ ಬಿಜೆಪಿ ಉಸ್ತುವರಿ ಮುರಳೀಧರ್ ರಾವ್ ಮಾಜಿ ಶಾಸಕ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರರು ಆಗಮಿಸಿದ್ದರು.

ಅದರಲ್ಲೂ ಉಮೇಶ್ ಕತ್ತಿ ಚಿಕ್ಕೋಡಿಯಿಂದ ತಮ್ಮ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡಲೇಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಉಮೇಶ್ ಕತ್ತಿ ಬೆಂಬಲಕ್ಕೆ ಮುರುಗೇಶ್ ನಿರಾಣಿ ಸಾಥ್ ನೀಡಿದ್ದು, ಈ ಬಾರಿ ಚಿಕ್ಕೋಡಿಯಲ್ಲಿ ರಮೇಶ್ ಕತ್ತಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.

ಕಳೆದ ಬಾರಿ ಕೇವಲ ಮೂರು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಅನಯಾಸವಾಗಿ ಗೆಲ್ಲುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ಪಕ್ಷಕ್ಕೆ ಸೇರ್ಪಡೆ:  ಇದೇ ವೇಳೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡು ಬಿಜೆಪಿ ತೊರೆದಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪುನಃ ಮಾತೃಪಕ್ಷಕ್ಕೆ ಮರಳಿದರು. ಯಡಿಯೂರಪ್ಪ ಸಮ್ಮುಖದಲ್ಲಿ ಎಸ್.ಕೆ.ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin