ಪೌರಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿ ನಾಮಪತ್ರ ಸಲ್ಲಿಸಿದ ಎ.ಮಂಜು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮಾ.25-ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನ ಪೌರಕಾರ್ಮಿಕ ದಂಪತಿಯ ಪಾದಪೂಜೆ ಮಾಡುವ ಮೂಲಕ ಗಮನ ಸೆಳೆದರು.

ಹಾಸನ ನಗರಸಭೆಯ ಮಾರ್ಕೆಟ್ ಬಳಿ ಇರುವ ಪೌರಕಾರ್ಮಿಕನ ಮನೆಗೆ ತೆರಳಿದ ಎ.ಮಂಜು ಅವರು ಚಂದ್ರು ಹಾಗೂ ಅವರ ಪತ್ನಿ ಅಶ್ವಿನಿಯ ಪಾದಪೂಜೆ ನೆರವೇರಿಸಿದರು.

ನಗರ ಶುಚಿ ಮಾಡುವಲ್ಲಿ ಪೌರಕಾರ್ಮಿಕರು ಮಹತ್ವದ ಪಾತ್ರ ವಹಿಸುತ್ತಾರೆ. ಹೀಗಾಗಿ ಅವರ ಪಾದಪೂಜೆ ಮಾಡಿರುವುದಾಗಿ ಮಂಜು ತಿಳಿಸಿದರು.  ಪಾದಪೂಜೆ ನಂತರ ಪೌರಕಾರ್ಮಿಕ ಚಂದ್ರು ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಪೌರಕಾರ್ಮಿಕರ ಪಾದ ತೊಳೆದಿದ್ದ ಪ್ರಧಾನಿ ಮೋದಿಯವರನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆವು.

ಆದರೆ ಮಾಜಿ ಸಚಿವ ಎ.ಮಂಜು ಅವರು ನಮ್ಮ ಮನೆಗೆ ಬಂದು ನಮ್ಮ ಕಾಲುಗಳನ್ನು ತೊಳೆದು ಪೂಜೆ ಮಾಡಿದರು. ನಮಗೆ ಸಾಕಷ್ಟು ಮುಜುಗರ ಉಂಟಾದರೂ ನಂತರ ಸಂತೋಷವಾಯಿತು ಎಂದು ಹೇಳಿದರು.

ಉತ್ತರ ಪ್ರದೇಶದ ಪ್ರಯಾಗದಲ್ಲಿ ನಡೆದ ಕುಂಭ ಮೇಳ ಸಂದರ್ಭದಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದ ಪೌರಕಾರ್ಮಿಕರ ಪಾದಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )