ಮೊದಲನೇ ಸಂಸಾರ ಚನ್ನಾಗೇ ಇತ್ತು, ಉಮೇಶ್ ಜಾಧವ್ ಅವರಿಗೆ 2ನೇ ಮದುವೆ ಬೇಕಿತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ಈಗಾಗಲೇ ಮದುವೆ ಆಗಿದೆ. ಚಿಕ್ಕ ಮಕ್ಕಳಿವೆ. ವೈವಾಹಿಕ ಜೀವನದಲ್ಲಿ ತೊಂದರೆ ಕೊಟ್ಟಿಲ್ಲ. ಆದರೂ ಮತ್ತೊಂದು ಮದುವೆಯಾಗುವ ಅಗತ್ಯವೇನಿದೆ ಎಂದು ಪ್ರಶ್ನಿಸುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್ ಜಾಧವ್ ಅವರನ್ನು ಮತದಾರ ಮಹಿಳೆಯೊಬ್ಬರು ಸಾಂಸಾರಿಕ ಜೀವನದ ವೃತ್ತಾಂತಕ್ಕೆ ಸಮೀಕರಿಸಿ ಪ್ರಶ್ನಿಸಿದ ಘಟನೆ ನಡೆಯಿತು.

ವಿಧಾನಸೌಧದ ಸಮಿತಿಯ ಮೂರನೇ ಕೊಠಡಿಯಲ್ಲಿ ಇಂದು ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್ ರಮೇಶ್ ಕುಮಾರ್ ವಿಚಾರಣೆ ನಡೆಸಿದರು.

ಜನರಿಂದ ಆಯ್ಕೆಯಾದ ಶಾಸಕರು ರಾಜೀನಾಮೆ ನೀಡುವಾಗ ಮತ ಹಾಕಿದ ಕ್ಷೇತ್ರದ ಜನರ ಅಭಿಪ್ರಾಯವನ್ನು ಕೇಳುವುದಿಲ್ಲ ಎಂಬ ಆಕ್ಷೇಪವಿದೆ. ಕಾನೂನಿನಲ್ಲೂ ಈ ಬಗ್ಗೆ ಸ್ಪಷ್ಟ ಅಭಿಪ್ರಾಯಗಳಿಲ್ಲ. ನಾನು ಇಂದು ಹೊಸ ಸಂಪ್ರದಾಯಕ್ಕೆ ಚಾಲನೆ ನೀಡುತ್ತಿದ್ದೇನೆ.

ಶಾಸಕ ಉಮೇಶ್ ಜಾಧವ್ ಅವರ ಕ್ಷೇತ್ರದ ಮತದಾರರು ಶಾಸಕರ ರಾಜೀನಾಮೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶ ನೀಡುತ್ತಿದ್ದೇನೆ. ಈ ಪ್ರಕರಣದಲ್ಲಿ ನಾನು ತೆಗೆದುಕೊಳ್ಳುವ ತೀರ್ಮಾನ ಐತಿಹಾಸಿಕವಾಗಲಿದೆ.

ಶಾಸಕರ ವಿರುದ್ಧ ಅನರ್ಹತೆಯ ದೂರು ವಿಚಾರಣೆ ಬಾಕಿ ಇರುವಾಗಲೇ ರಾಜೀನಾಮೆ ನೀಡಿರುವ ಪ್ರಸಂಗ ಎಲ್ಲಿಯೂ ನಡೆದಿಲ್ಲ. ಹಾಗಾಗಿ ಈ ವಿಚಾರಣೆ ಮಹತ್ವದ್ದಾಗಿದೆ ಎಂದು ಹೇಳಿದ್ದರಲ್ಲದೆ, ಕ್ಷೇತ್ರದ ಮತದಾರರಿಗೆ ವಾದ ಮಂಡಿಸಲು ಅವಕಾಶ ನೀಡಿದ್ದರು.

ಚಿಂಚೋಳಿ ಕ್ಷೇತ್ರದ ನಿಯೋಜಿತ ಗೃಹಿಣಿ ಹಾಗೂ ಸ್ವಯಂ ಸೇವಾ ಸಹಕಾರ ಸಂಸ್ಥೆಯ ಮಹಿಳೆಯೊಬ್ಬರು ಉರ್ದುವಿನಲ್ಲಿ ಮಾತನಾಡಿ, ಎಲ್ಲರೂ ಸೇರಿ ಜಾಧವ್ ಅವರನ್ನು ಎರಡನೇ ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ.

ಈಗ ಅವರು ಎರಡನೇ ಮದುವೆಯಾಗಲು ಹೊರಟಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಇನ್ನೂ ಚಿಕ್ಕ ಮಗುವಿನಂತಿದೆ. ಮತದಾರರು ಶಾಸಕರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ವೈವಾಹಿಕ ಜೀವನದಲ್ಲಿ ತೊಂದರೆ ಕೊಟ್ಟಾಗ ಮಾತ್ರ ವಿಚ್ಚೇದನ ನೀಡಲು ಸಾಧ್ಯವಿದೆ. ಈಗ ಶಾಸಕರು ಕ್ಷೇತ್ರವನ್ನು ಬಿಟ್ಟು ಹೋಗುತ್ತಿರುವುದೇಕೆ ? ಅಭಿವೃದ್ಧಿ ಎಂಬ ಮಗುವನ್ನು ಅನಾಥವಾಗಿ ಮಾಡಿ ಹೋಗುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಮಹಿಳೆಯ ಮಾತುಗಳು ಸ್ಪೀಕರ್ ಅವರ ಹೃದಯ ತಟ್ಟಿತು. ಮತದಾರರು ಮತ್ತು ಜನಪ್ರತಿನಿಧಿಗಳ ಸಂಬಂಧ ಅತ್ಯಂತ ಅಮೂಲ್ಯವಾದುದ್ದು ಎಂದು ಭಾವುಕರಾಗಿ ನುಡಿದರು.  ಕ್ಷೇತ್ರದ ಮತದಾರರಾದ ಶಿವಕುಮಾರ್ ಪೊಳ್ಳೂರು, ರಾಜ್‍ಕುಮಾರ್ ಮತ್ತಿತರರು ಈ ಮೊದಲು ದೂರು ನೀಡಿದ್ದರಿಂದ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು.

ಅರ್ಜಿ ಸಲ್ಲಿಸದೇ ಇದ್ದ ಬಸಯ್ಯ ಗುತ್ತೇದಾರ್, ಜಿಪಂ ಮಾಜಿ ಸದಸ್ಯ ಬಿ.ಟಿ.ಪಾಟೀಲ್ ಅವರಿಂದ ಸ್ಥಳದಲ್ಲೇ ಅರ್ಜಿ ಬರೆಸಿಕೊಂಡು ಮಾತನಾಡಲು ಅವಕಾಶ ನೀಡಲಾಯಿತು.  ಮಾತನಾಡಿದ ಮತದಾರರೆಲ್ಲಾ ಸತ್ಯವನ್ನೇ ಹೇಳುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದರು. ಐದು ವರ್ಷ ಶಾಸಕರಾಗಿ ಕೆಲಸ ಮಾಡಲು ನಾವು ವೋಟು ಹಾಕಿದ್ದೇವೆ.

ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಕೈ ಮುಗಿದು ಮತ ಕೇಳಿದ ನೀವು ರಾಜೀನಾಮೆ ಕೊಟ್ಟು ಹೋಗುವಾಗ ನಮ್ಮ ಅಭಿಪ್ರಾಯವನ್ನು ಏಕೆ ಕೇಳಲಿಲ್ಲ ಎಂದು ಉಮೇಶ್ ಜಾಧವ್ ಅವರ ಮುಖಾಮುಖಿಯಾಗಿ ಪ್ರಶ್ನೆ ಕೇಳಿದರು.

ಈಗಲೂ ಮನಸ್ಸು ಬದಲಾಯಿಸಿ ಶಾಸಕರಾಗಿ ಮುಂದುವರೆಯಿರಿ, ಚಿಂಚೋಳಿ ಕ್ಷೇತ್ರ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು. ಸ್ಪೀಕರ್ ಅವರ ಸಲಹೆ ಮೇರೆಗೆ ಮಾತನಾಡಿದ ಶಾಸಕ ಉಮೇಶ್ ಜಾಧವ್ ಅವರು, ನನಗೆ ಮತ ಹಾಕಿ ಗೆಲ್ಲಿಸಿದವರಿಗೆ ಧನ್ಯವಾದಗಳು. ಇಲ್ಲಿ ಮಾತನಾಡುತ್ತಿರುವವರು ನನ್ನ ಮತದಾರರು ಎಂದು ಹೇಳುತ್ತಿದ್ದಾರೆ.

ಆರು ತಿಂಗಳಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ರಾಜೀನಾಮೆ ಕುರಿತು ಸ್ಪೀಕರ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧನಾಗಿರುತ್ತೇನೆ. ಇಲ್ಲಿ ಮಾತನಾಡಿದ ಮತದಾರರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin