ಕೃಷ್ಣಭೈರೇಗೌಡ-ಕುಮಾರಸ್ವಾಮಿ ಮೀಟಿಂಗ್, ಸದಾನಂದಗೌಡರನ್ನು ಮಣಿಸಲು ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಸಚಿವ ಕೃಷ್ಣಭೈರೇಗೌಡ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಖಾಸಗಿ ಹೊಟೇಲ್‍ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿನ್ನೆ ರಾತ್ರಿ ಆಯ್ಕೆಯಾದ ಕೃಷ್ಣಭೈರೇಗೌಡ ಅವರು ಇಂದು ಬೆಳಗ್ಗೆಯಿಂದ ಚಟುವಟಿಕೆ ಆರಂಭಿಸಿದ್ದು, ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದರು.

ಈ ಮೊದಲು ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿತ್ತು. ಅಭ್ಯರ್ಥಿಗಳ ಕೊರತೆಯಿಂದಾಗಿ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ.  ಸಚಿವರಾಗಿದ್ದು ಕೊಂಡೇ ಸ್ಪರ್ಧೆಗಿಳಿದಿರುವ ಕೃಷ್ಣಭೈರೇಗೌಡ ಅವರು, ಕ್ಷೇತ್ರದ ಪ್ರಮುಖ ನಾಯಕರ ಜೊತೆ ಇಂದು ಸಮಾಲೋಚನೆ ನಡೆಸಿದರು.

ಕಾಂಗ್ರೆಸ್‍ನ 7 ಮಂದಿ ಶಾಸಕರನ್ನೂ ಸಂಪರ್ಕಿಸಿರುವ ಕೃಷ್ಣಭೈರೇಗೌಡ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.

ಕೃಷ್ಣಭೈರೇಗೌಡ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದರೆ ಸಚಿವ ಸ್ಥಾನವೊಂದು ಖಾಲಿಯಾಗಲಿದ್ದು, ಅದರಲ್ಲಿ ಅವಕಾಶ ಗಿಟ್ಟಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಶಾಸಕರದ್ದಾಗಿದ್ದು, ಹೀಗಾಗಿ ಕಾಂಗ್ರೆಸ್ ಗೆಲುವಿಗೆ ಹಗಲಿರುಳು ಶ್ರಮಿಸಲು ಮುಂದಾಗಿದ್ದಾರೆ. ರಾಜಕೀಯ ದಿಢೀರ್ ಬೆಳವಣಿಗೆಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin