ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ-ಬಚ್ಚೇಗೌಡ ನಡುವೆ ಬಿಗ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮಾ.26- ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ನಿನ್ನೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಧುಮಕಿದರು.

ಬಿಜೆಪಿಯಲ್ಲಿ ಬಿ.ಎನ್.ಬಚ್ಚೇಗೌಡ ಅವರ ಸ್ಪರ್ಧೆಗೆ ಅಷ್ಟೇನು ಅಸಮಾಧಾನ ವ್ಯಕ್ತವಾದಂತೆ ಕಂಡು ಬರಲಿಲ್ಲ. ಪಕ್ಷದ ಎಲ್ಲ ಪ್ರಮುಖರು ಆಗಮಿಸಿ ನಾಮಪತ್ರ ಸಲ್ಲಿಕೆ ವೇಳೆ ಒಗ್ಗಟ್ಟು ಪ್ರದರ್ಶಿಸಿದರು. ಮೈತ್ರಿ ಅಭ್ಯರ್ಥಿಯಾದ ಮೊಯ್ಲಿರವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಉಪಸ್ಥಿತರಿದರಿದಿರುವುದು ಹಲವು ಕುತೂಹಲಕ್ಕೆ ಕಾರಣವಾಯಿತು.

ವೀರಪ್ಪ ಮೊಯ್ಲಿಯವರು ಇಂದು ನಂದಿಗ್ರಾಮದಲ್ಲಿ ಇರುವ ಭೋಗ ನಂದಿಶ್ವೇರ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಂ.ಟಿ.ಬಿನಾಗರಾಜ್, ಶಿವಶಂಕರರೆಡ್ಡಿ, ವೆಂಕಟರಮಣಪ್ಪ, ಶಾಸಕ ಕೆ.ಸುಧಾಕರ್ ರೆಡ್ಡಿ, ಕೇಶವರೆಡ್ಡಿ ಮುಂತಾದವರು ಇದ್ದರು.

ಆದರೆ ಜೆಡಿಎಸ್‍ನ ಮುಖಂಡರ್ಯಾರು ಈ ಸಂದರ್ಭದಲ್ಲಿ ಕಂಡುಬರಲಿಲ್ಲ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿದರೆ ನಾವು ಬಹಿರಂಗವಾಗಿ ವಿರೋಧ ಮಾಡುತ್ತೇವೆ ಎಂದು ಹಲವು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಹಲವು ಜೆಡಿಎಸ್ ಮುಖಂಡರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿ ವೀರಪ್ಪ ಮೊಯ್ಲಿಯವರು, ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ಶಾಶ್ವತ ನೀರಾವರಿ ಯೋಜನೆಗಳನ್ನು ಪೂರೈಸುವುದು ನನ್ನ ಗುರಿಯಂದು ಹೇಳಿದರು.

ಎಚ್.ಎನ್ ವ್ಯಾಲಿ ಯೋಜನೆ, ಎತ್ತಿನಹೊಳೆ ಯೋಜನೆ ಸೇರಿದಂತೆ ನಾನು ನೀಡಿರುವ ಹಲವು ಭರವಸೆಯನ್ನು ಈ ಅವಧಿಯಲ್ಲಿ ಈಡೇರಿಸುತ್ತೇನೆ. ಹಲವು ತಾಂತ್ರಿಕ ಕಾರಣದಿಂದ ವಿಳಂಭವಾಗಿವೆ ಎಂದು ಮೊಯ್ಲಿ ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ನಮ್ಮಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು. ನಮ್ಮಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆಯಲ್ಲಿ ಜಯಗೊಳಿಸುವ ಹಿನ್ನೆಲೆಯಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )