ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ಭರ್ಜರಿ ಬೇಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ಪಶ್ಚಿಮ ವಿಭಾಗದ ಚಂದ್ರಾ ಲೇಔಟ್ ಪೊಲೀಸರು ಸರ ಅಪಹರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ 1,18,73,000ರೂ. ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಗಮನ ಬೇರೆಡೆ ಸೆಳೆದು ವಂಚನೆ, ಸರ ಅಪಹರಣ, ವಾಹನ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದ ಬಗ್ಗೆ ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದರು.

ಚಂದ್ರಾ ಲೇಔಟ್ ಠಾಣೆ ಪೊಲೀಸರು ಆರೋಪಿ ಸಯ್ಯದ್ ಅಬೂಬಕ್ಕರ್ ಸಿದ್ದಿಕಿ (38) ಎಂಬ ಹಳೆ ಆರೋಪಿಯನ್ನು ಬಂಧಿಸಿ 57 ಪ್ರಕರಣಗಳಿಗೆ ಸಂಬಂಧಿಸಿದಂತೆ 91.13 ಲಕ್ಷ ರೂ. ಬೆಲೆಬಾಳುವ 2 ಕೆಜಿ 257 ಗ್ರಾಂ ಚಿನ್ನದ ಆಭರಣಗಳು, ಎರಡು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ವಾಕಿಟಾಕಿಯನ್ನು ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಜೀವನ ನಡೆಸಲು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮೈಕೋ ಲೇಔಟ್ ಠಾಣೆ ವ್ಯಾಪ್ತಿಯ ಸೆಕ್ಯೂರಿಟಿ ಬಳಿ ಇದ್ದ ವಾಕಿಟಾಕಿಯನ್ನು ಕಳವು ಮಾಡಿದ್ದನಲ್ಲದೆ ಇದೇ ವ್ಯಾಪ್ತಿಯನ್ನು ಟಿವಿಎಸ್ ಬೈಕ್‍ಅನ್ನು ಕಳ್ಳತನ ಮಾಡಿದ್ದನು.

ಈ ಬೈಕ್ ಬಳಸಿಕೊಂಡು ವಿವಿಧೆಡೆ ಸುತ್ತಾಡಿ ವಾಯುವಿಹಾರಕ್ಕೆ ಹೋಗುವ ವೃದ್ಧರನ್ನು ತಡೆದು ನಾನು ಪೊಲೀಸ್ ಎಂದು ವಾಕಿಟಾಕಿ ತೋರಿಸಿ ಪರಿಚಯಿಸಿಕೊಂಡು ನೀವು ಈ ರೀತಿ ಆಭರಣ ಧರಿಸಿಕೊಂಡು ಹೋಗಬೇಡಿ. ಮುಂದಿನ ರಸ್ತೆಯಲ್ಲಿ ಗಲಾಟೆಯಾಗುತ್ತಿದೆ. ಕತ್ತಿನಲ್ಲಿರುವ ಸರ ಬಿಚ್ಚಿ ಬ್ಯಾಗಿನಲ್ಲಿ ಹಾಕಿಕೊಡುತ್ತೇನೆ ಎಂದು ಸಬೂಬು ಹೇಳಿ ಅವರ ಬಳಿ ಇದ್ದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದನು.

ಈತ ಈ ಹಿಂದೆಯೂ ದ್ವಿಚಕ್ರ ವಾಹನ ಪ್ರಕರಣದಲ್ಲಿ ಎಚ್‍ಎಎಲ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದನು. ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆಯೂ ತನ್ನ ಚಾಳಿ ಮುಂದುವರಿಸಿದ್ದನು. ಅಲ್ಲದೆ, ಸಹಚರ ತೇಜಸ್ ಎಂಬುವನೊಂದಿಗೆ ಸೇರಿಕೊಂಡು ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರಗಳನ್ನು ಅಪಹರಿಸುತ್ತಿದ್ದನು.

ವಿದ್ಯಾರಣ್ಯಪುರ ಹಾಗೂ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳವು ಮಾಡಿದ್ದನಲ್ಲದೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದನು. ಆರೋಪಿ ಬಂಧನದಿಂದ ಚಂದ್ರಾಲೇಔಟ್ ಠಾಣೆಯ 5 ಪ್ರಕರಣ, ಆರ್‍ಆರ್ ನಗರದ 5, ಅನ್ನಪೂರ್ಣೇಶ್ವರಿ ನಗರ ಠಾಣೆಯ 5, ಜ್ಞಾನಭಾರತಿ ಮತ್ತು ಬ್ಯಾಟರಾಯನಪುರ ಠಾಣೆಯ ತಲಾ ಒಂದೊಂದು ಪ್ರಕರಣ, ವಿಜಯನಗರ 2, ಕಾಟನ್‍ಪೇಟೆ 1, ತಲಘಟ್ಟಪುರ 2, ಕೋಣನಕುಂಟೆ 1, ಸುಬ್ರಹ್ಮಣ್ಯಪುರ ಠಾಣೆಯ 5, ಬಸವೇಶ್ವರನಗರ ಠಾಣೆಯ 2 ಪ್ರಕರಣಗಳು ಸೇರಿದಂತೆ ಒಟ್ಟು 68 ಪ್ರಕರಣಗಳು ಪತ್ತೆಯಾದಂತಾಗಿವೆ.

ಮತ್ತೊಂದು ಪ್ರಕರಣದಲ್ಲಿ ಆರೋಪಿ ಚಲುವರಾಯ ಎಂಬಾತನನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ಸಾಮಾನ್ಯ ಪ್ರಕರಣ, ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 15.60 ಲಕ್ಷ ರೂ. ಮೌಲ್ಯದ 520 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಐದು ತಿಂಗಳ ಹಿಂದೆ ಚಂದ್ರಾಲೇಔಟ್ ಎಸ್‍ಬಿಐ ಲಾಕರ್‍ನಲ್ಲಿ 600 ಗ್ರಾಂ ಚಿನ್ನದ ಆಭರಣಗಳನ್ನು ಪಡೆದುಕೊಂಡು ಉಮೇಶ್ ಎಂಬುವವರು ತಮ್ಮ ಕಾರಿನ ಸೀಟಿನ ಮೇಲೆ ಇಟ್ಟುಕೊಂಡು ಚಂದ್ರಾ ಲೇಔಟ್, ವಿಡಿಯೋ ಲೇಔಟ್‍ನ 4ನೆ ಕ್ರಾಸ್‍ನ ಮನೆ ಮುಂದೆ ಕಾರ್ ನಿಲ್ಲಿಸಿ ಆಭರಣವಿದ್ದ ಬ್ಯಾಗನ್ನು ಡಿಕ್ಕಿಯಲ್ಲಿಟ್ಟು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಆರೋಪಿ ಚಲುವರಾಯ ಗಾಜು ಒಡೆದು ಆಭರಣದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿ ಶ್ರೀರಂಗಪಟ್ಟಣ, ಹಲಗೂರು ಮತ್ತು ಮೈಸೂರಿನಲ್ಲಿ ಮಾರಾಟ ಮಾಡಿದ್ದನು.

ಇದೀಗ ಈ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಚಂದ್ರಾಲೇಔಟ್‍ನ ಮಾನಸ ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ 20 ಗ್ರಾಂ ಆಭರಣ ಕಳವು ಮಾಡಿ ಹೋಗುವ ವೇಳೆ ಆಭರಣ ಸಮೇತ ಸಿಕ್ಕಿಬಿದ್ದಿದ್ದಾನೆ.

ಈತನ ವಿರುದ್ಧ ಉಪ್ಪಾರಪೇಟೆ, ಮಡಿವಾಳ, ಕುಂಬಳಗೋಡು, ಮೈಸೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಜೈಲುಶಿಕ್ಷೆ ಅನುಭವಿಸಿ ಹೊರಬಂದ ನಂತರವೂ ಪುನಃ ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದನು.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕನ್ನಗಳವು ಹಾಗೂ ಮನೆಗಳವು ಪ್ರಕರಣದಲ್ಲಿ ಅಹಮ್ಮದ್ ಮತ್ತು ಅಕ್ಮಲ್‍ಬೇಗ್ ಎಂಬುವವರನ್ನು ಬಂಧಿಸಿ 12 ಲಕ್ಷ ರೂ. ಬೆಲೆಬಾಳುವ 405 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )