2ನೇ ಹಂತದ ಚುನಾವಣೆಗೆ ಮಾ.28ಕ್ಕೆ ಅಧಿಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26-ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಮಾ.28 ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.23ರಂದು ಮತದಾನ ನಡೆಯಲಿದ್ದು, ಮಾ.28 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಏ.5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ವಾಪಸ್ ಹಿಂಪಡೆಯಲು ಏ.8ರವರೆಗೆ ಅವಕಾಶವಿದೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 23 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ :  ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕಡೆಯ ದಿನವಾಗಿದೆ. ಮೊದಲ ಹಂತದಲ್ಲಿ ರಾಜ್ಯದ 14 ವಿಧಾನಸಭಾ ಕ್ಷೇತ್ರಗಳಿಗೆ ಮಾ.19 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು.

ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಮಾ.27 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾ.29ರವರೆಗೆ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )