ಕೌಟುಂಬಿಕ ಜಗಳ, ಪತ್ನಿ ಕೊಂದು ಪರಾರಿಯಾದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಮಾ.26- ಪತ್ನಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಪತಿ, ಆಕೆ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ತಮಿಳುನಾಡು, ವೆಲ್ಲೂರು ಜಿಲ್ಲೆ, ತಿರುಪತ್ತೂರು ತಾಲೂಕು ನಿವಾಸಿ ವಳ್ಳಿ (37) ಕೊಲೆಯಾದ ದುರ್ದೈವಿ.

ಕಟ್ಟಡ ನಿರ್ಮಾಣ ಕೆಲಸಕ್ಕೆಂದು ರಾಜ (46) ತನ್ನ ಪತ್ನಿ ವಳ್ಳಿ ಹಾಗೂ ಪುತ್ರನೊಂದಿಗೆ ಬೆಂಗಳೂರಿಗೆ ಬಂದು ಜಿಗಣಿ ಹೋಬಳಿಯ ಸೀತನಾಯಕನಹಳ್ಳಿ ಗ್ರಾಮದ ಬಳಿ ಕೆಎನ್‍ಎಸ್ ಲೇಔಟ್‍ನಲ್ಲಿರುವ ಹಾರಗದ್ದೆ ಗ್ರಾಮದ ಶಿವಕುಮಾರ್ ಎಂಬುವವರ ಮನೆ ನಿರ್ಮಾಣ ಕೆಲಸ ಮಾಡಿಕೊಂಡು ಅಲ್ಲೇ ಶೆಡ್‍ನಲ್ಲಿ ಪುತ್ರ ವಿಜಯ್ ಜತೆ ವಾಸವಾಗಿದ್ದರು.

ನಿನ್ನೆ ಬೆಳಗಿನ ಜಾವ 1.30ರ ಸಮಯದಲ್ಲಿ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ದೊಣ್ಣೆಯಿಂದ ಪತ್ನಿ ವಳ್ಳಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪತಿ ರಾಜ ತಲೆಮರೆಸಿಕೊಂಡಿದ್ದಾನೆ.

ಸುದ್ದಿ ತಿಳಿದ ಜಿಘಣಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

#ಪತಿ ಆತ್ಮಹತ್ಯೆಗೆ ಕಾರಣಳಾದ ಪತ್ನಿ ಸೆರೆ  : ಕೊಳ್ಳೇಗಾಲ, ಮಾ.26- ಪತಿಯ ಆತ್ಮಹತ್ಯೆಗೆ ಕಾರಣಳಾಗಿದ್ದ ಪತ್ನಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕೆಂಪನಿಂಗೇಗೌಡನ ಪತ್ನಿ ರಾಜೇಶ್ವರಿ ಬಂಧಿತ ಆರೋಪಿ.

ಈಕೆಯ ಅನೈತಿಕ ಸಂಬಂಧ ಹಾಗೂ 3 ಲಕ್ಷ ರೂ. ಕೊಡದಿದ್ದರೆ ನಿಮ್ಮನ್ನು ಬೀದಿಪಾಲು ಮಾಡಿ ಹೋಗುತ್ತೇನೆ ಎಂದು ತನ್ನ ಗಂಡನಿಗೆ ರಾಜೇಶ್ವರಿ ಹಾಕಿದ್ದ ಬೆದರಿಕೆಯಿಂದ ನೊಂದ ಪತಿ ಕೆಂಪನಿಂಗೇಗೌಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಈಕೆಗೆ ಕೆಂಪನಪಾಳ್ಯದ ಲಿಂಗರಾಜ್ ಉರುಫ್ ಗುಪ್ತ ಎಂಬಾತನೊಂದಿಗೆ ಅನೈತಿಕ ಸಂಬಂಧವಿತ್ತಲ್ಲದೆ ಕಳೆದ ನಾಲ್ಕು ತಿಂಗಳ ಹಿಂದೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದರು. ಮತ್ತೆ ಗ್ರಾಮಕ್ಕೆ ಹಿಂದಿರುಗಿ ಬಂದು ಗಂಡನಿಗೆ 3 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಳು. ಜನತೆ ಹೀನಾಯವಾಗಿ ನಿಂದಿಸದ್ದರಿಂದ ಜಿಗುಪ್ಸೆಗೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದ.

ಈ ಸಂಬಂಧ ಮಗ ರವಿ ತಾಯಿ ವಿರುದ್ಧ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಕೆಯ ಪ್ರೇಮಿ ತಲೆಮರೆಸಿಕೊಂಡಿದ್ದಾನೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )