ನಾನು ಮಾತಾಡಲ್ಲ ನನ್ನ ಕೆಲಸವೇ ಮಾತನಾಡುತ್ತದೆ : ಸುಮಲತಾ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮಾ.26- ನಾನು ಮಾತನಾಡುವುದಿಲ್ಲ. ನನ್ನ ಕೆಲಸವೇ ಮಾತನಾಡುತ್ತದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಇಂದು ಕೆಆರ್‍ಎಸ್ ಬಳಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾತನಾಡಿದ ಅವರು, ಅಂಬರೀಶ್ ಸಹ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆ ಬಗ್ಗೆ ಅವರು ಹೇಳಿಕೊಳ್ಳುತ್ತಿರಲಿಲ್ಲ. ಅದೇ ರೀತಿ ನಾನು ಸಹ ಮಾತನಾಡುವುದಿಲ್ಲ. ನನ್ನ ಕೆಲಸಗಳೇ ಎಲ್ಲವನ್ನು ಹೇಳುತ್ತವೆ ಎಂದರು.

ನಮ್ಮ ಕೆಲಸಗಳೇ ನಮ್ಮನ್ನು ಗುರುತಿಸುವಂತಾಗಬೇಕು. ಆ ರೀತಿ ಕೆಲಸ ಮಾಡುತ್ತೇನೆ. ತಾನು ಚುನಾವಣೆಗೆ ನಿಂತಿರುವುದು ಜಾತಿ ರಾಜಕಾರಣಕ್ಕಾಗಿ ಅಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.

ಸುಮಲತಾ ಅಂಬರೀಷ್‌ಗೆ ಹೊಸ ಸವಾಲು :
ಮಂಡ್ಯ ಲೋಕಸಭಾ ಕಣದಲ್ಲಿ ತೀವ್ರ ಸವಾಲೊಡ್ಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರನ್ನು ಕಟ್ಟಿಹಾಕುವ ಯತ್ನವಾಗಿ ಅವರದೇ ಹೆಸರಿನ ಇನ್ನೂ ಮೂವರು ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್‌ ಮುಂದಾಗಿದೆ.

ಕನಕಪುರ ಮೂಲದ ಪಿ. ಸುಮಲತಾ, ಕೆ.ಆರ್.ಪೇಟೆ ತಾಲ್ಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬವರು ಇಂದು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿಸುವ ಯತ್ನವಾಗಿ ಸುಮಲತಾ ಎಂಬ ಹೆಸರಿನ ಇನ್ನೂ ಮೂರು ಮಂದಿಯನ್ನು ಕಣಕ್ಕಿಳಿಸುವ ತಂತ್ರ ಹೂಡಲಾಗಿದೆ ಎಂದು ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ಈ ಮೂಲಕ ಮಂಡ್ಯದಲ್ಲಿ ‘ದಳಪತಿ’ಗಳು ಸುಮಲತಾಗೆ ದೊಡ್ಡ ಆಘಾತ ನೀಡಲು ಮುಂದಾಗಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )