48 ಗಂಟೆಯೊಳಗೆ ಕಮ್ಮನಹಳ್ಳಿ ಕಾಮುಕರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Bengaluru-New-Year

ಬೆಂಗಳೂರು,ಜ.5– ನಗರದ ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೂರ್ವ ವಿಭಾಗದ ಪೊಲೀಸರು ನಾಲ್ವರು ಕಾಮಾಂಧರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕುರಿತು ಸುದ್ದಿಘೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಪ್ರಮುಖ ಆರೋಪಿ ಅಯ್ಯಪ್ಪ ಮತ್ತು ಆತನ ಜೊತೆಗಿದ್ದ ಲೀನೊ , ಸೋಮಶೇಖರ್ ಅಲಿಯಾಸ್ ಚಿನ್ನು , ಸುದೇಶ್ ಅಲಿಯಾಸ್ ರಾಜಾನನ್ನು ಬಂಧಿಸಲಾಗಿದೆ. ಇವರಿಂದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಕೃತ್ಯ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಬಂಧಿತ ಆರೋಪಿಗಳು ಬಾಣಸವಾಡಿ ನಿವಾಸಿಗಳಾಗಿದ್ದು, ಸಂತ್ರಸ್ತ ಯುವತಿಯ ಮನೆಯ ಬಳಿಯೇ ವಾಸವಿದ್ದರು. ವೃತ್ತಿಯಲ್ಲಿ ಇವರುಗಳು ಚಾಲಕರು ಹಾಗೂ ಡಿಲೆವರಿ ಬಾಯ್ ಗಳಾಗಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು ಸಂತ್ರಸ್ತ ಯುವತಿ ದೂರು ನೀಡಿದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದು ನಮ್ಮ ಪೊಲೀಸರು ನೀಡುತ್ತಿರುವ ಎಚ್ಚರಿಕೆ ಸಂದೇಶ, ಇಂಥಕ ಕುಕೃತ್ಯಗಳನ್ನ ನಡೆಸುವವರ ವಿರುದ್ಧ ತಕ್ಕ ಶಾಸ್ತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಸಾರ್ವಜನಿಕರು ಇಂತಹ ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಒಂಟಿ ಯುವತಿಯರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಕಳೆದ ಒಂದು ವಾರದಿಂದ ಸಂತ್ರಸ್ತೆಯ ಬೆನ್ನು ಬಿದ್ದಿದ್ದರಲ್ಲದೆ ದಿನವೂ ಸಹಚರರ ಜೊತೆ ಫಾಲೋ ಮಾಡುತ್ತಿದ್ದರು ಎಂದು ಆರೋಪಿಗಳು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.  ಡಿ.31ರ ರಾತ್ರಿ ಸಂತ್ರಸ್ತ ಯುವತಿ ಸಿಡ್ವಿಕ್ ಹೋಟೆಲ್‍ಗೆ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದು , ಅಲ್ಲಿಂದ ವಾಪಸ್ಸಾಗುವಾಗ ಆರೋಪಿಗಳು ಆಕೆಯನ್ನು ಹಿಂಬಾಲಿಸಿ ಬಂದಿದ್ದರು. ಕೃತ್ಯ ವೇಳೆ ಬೈಕ್‍ನಲ್ಲಿ ರಸ್ತೆಯಲ್ಲಿ ಕಾದಿದ್ದ ಇನ್ನು ನಾಲ್ವರು ಆರೋಪಿಗಳ ಪೈಕಿ ಸೋಮ ಅಲಿಯಾಸ್ ಚಿನ್ನು ಮತ್ತು ರಾಜ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಘಟನೆ ಸಂಬಂಧ 6 ಸಿಸಿಟಿವಿಗಳ ದೃಶ್ಯ ಪರಿಶೀಲಿಸಿರುವ ಪೊಲೀಸರು 6 ಆರೋಪಿಗಳ ಚಹರೆ ಪತ್ತೆ ಹಚ್ಚಿದ್ದಾರೆ. ಡಿ.31ರ ರಾತ್ರಿ 8.48ರಿಂದ 8.56ರವರೆಗೆ ಕಮ್ಮನಹಳ್ಳಿ ಸರ್ಕಲ್‍ನಲ್ಲಿರುವ ಬಕೆಟ್ ಬಿರಿಯಾನಿ ಹೋಟೆಲ್ ಬಳಿ ಇದ್ದರಲ್ಲದೆ ಸುಲ್ತಾನ್ ಬಾಯ್ ಎಂಬಾತನ ಜತೆ ಮಾತನಾಡಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸುಲ್ತಾನ್ ಬಾಯ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಸೋಮನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸುತ್ತಿದ್ದಂತೆ ಆತ ಘಟನೆ ಬಗ್ಗೆಯೇ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕೆಆರ್‍ಪುರಂ ಉಪವಿಭಾಗದ ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಕೃತ್ಯ ನಡೆದ ಕಮ್ಮನಹಳ್ಳಿಯ ಲಾರೆನ್ಸ್ ರಸ್ತೆಯ ನಿವಾಸಿ ಫ್ರಾನ್ಸಿಸ್ ಎಂಬುವರು ತಮ್ಮ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳನ್ನು ಜ.2ರ ಸಂಜೆ ಪೊಲೀಸರಿಗೆ ನೀಡಿದ್ದರು ಇದರ ಆಧಾರದಲ್ಲಿ ತನಿಖೆ ನಡೆಸಿದ ಪೂರ್ವ ವಿಭಾಗದ ಪೊಲೀಸರು ನಿನ್ನೆ ಸಂಜೆ ವೇಳೆಗೆ 12 ಜನ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅವರಲ್ಲಿ ನಾಲ್ವರು ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin