68 ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕನಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

ksrtc

ಬೆಂಗಳೂರು, ಡಿ.15- ಚಾಮರಾಜನಗರ ಸಮೀಪದ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಂಭವಿಸಬಹುದಾಗಿದ್ದ ಬಸ್ ಅಪಘಾತವನ್ನು ತಪ್ಪಿಸಿ 68 ಪ್ರಯಾಣಿಕರ ಪ್ರಾಣ ರಕ್ಷಿಸಿದ ಕೆಎಸ್‍ಆರ್‍ಟಿಸಿ ಬಸ್ ಚಾಲಕನಿಗೆ ಸಂಸ್ಥೆ 10ಸಾವಿರ ರೂ. ನಗದು ಹಾಗೂ ಚಿನ್ನದ ಪದಕ ಘೋಷಿಸಿದೆ. ಚಾಮರಾಜನಗರ ಗುಂಡ್ಲುಪೇಟೆ ಘಟಕದ ಚಾಲಕ ಚಿನ್ನಸ್ವಾಮಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಗೋಪಾಲಸ್ವಾಮಿ ಬೆಟ್ಟ ಮಾರ್ಗದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅ.8ರಂದು ಮಧ್ಯಾಹ್ನ 2.35ರ ಸಮಯದಲ್ಲಿ ಹಿಮವತ್ ಗೋಪಾಲಸ್ವಾಮಿ ಬೆಟ್ಟದ ತಿರುವಿನಲ್ಲಿ ಬಸ್ ಇಳಿಯುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಇಳಿಜಾರಿನಿಂದ ಪ್ರಪಾತಕ್ಕೆ ಬೀಳುವುದರಲ್ಲಿತ್ತು.

ಅಷ್ಟರಲ್ಲಿ ಚಾಲಕ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬ್ರೇಕ್ ಹಾಕಿ ಸಂಭವನೀಯ ಅಪಘಾತ ತಪ್ಪಿಸಿ ಬಸ್‍ನಲ್ಲಿದ್ದ 68 ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಈ ಚಾಲಕನ ಧೈರ್ಯ ಮತ್ತು ನಿಶ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಅವರು 10ಸಾವಿರ ರೂ. ನಗದು ಬಹುಮಾನ ಹಾಗೂ ಚಿನ್ನದ ಪದಕವನ್ನು ಚಿನ್ನಸ್ವಾಮಿಗೆ ಘೋಷಿಸಿದ್ದಾರೆ. ಚಿನ್ನದ ಪದಕ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿರುವ ಚಾಲಕ ಚಿನ್ನಸ್ವಾಮಿ, ಇಷ್ಟೊಂದು ಪ್ರಯಾಣಿಕರ ಪ್ರಾಣ ಉಳಿಸಿದ ಬಗ್ಗೆ ನನಗೆ ಹೆಮ್ಮೆ ಮತ್ತು ಸಮಾಧಾನವಿದೆ ಎಂದಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin