Saturday, April 20, 2024
Homeರಾಜ್ಯದೆಹಲಿಗೆ ಕರೆಸಿ ಭೇಟಿಯಾಗದೆ ವಾಪಸ್ ಕಳಿಸಿದ ಅಮಿತ್ ಶಾ : ಈಶ್ವರಪ್ಪ ಮತ್ತಷ್ಟು ಧಗ ಧಗ

ದೆಹಲಿಗೆ ಕರೆಸಿ ಭೇಟಿಯಾಗದೆ ವಾಪಸ್ ಕಳಿಸಿದ ಅಮಿತ್ ಶಾ : ಈಶ್ವರಪ್ಪ ಮತ್ತಷ್ಟು ಧಗ ಧಗ

ಬೆಂಗಳೂರು,ಏ.4- ಮೊದಲೇ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಕೊತಕೊತ ಕುದಿಯುತ್ತಿರುವ ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಈಗ ಮತ್ತಷ್ಟು ಗರಂ ಆಗಿದ್ದಾರೆ. ದೆಹಲಿಗೆ ಬರುವಂತೆ ಸೂಚಿಸಿದ್ದ ಅಮಿತ್ ಶಾ, ಅವರನ್ನು ಭೇಟಿ ಮಾಡದೇ ವಾಪಸ್ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆ, ಚನ್ನಪಟ್ಟಣದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಶಾ, ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ, ಈಶ್ವರಪ್ಪನವರ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈಶ್ವರಪ್ಪನವರ ಸಿಟ್ಟು ತಣ್ಣಗಾಗದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದರು.

ಸೂಚನೆಯ ಮೇರೆ ಈಶ್ವರಪ್ಪ ನಿನ್ನೆ ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದರು. ಆದರೆ, ಇಡೀ ದಿನ ಕಾದರೂ ಅಮಿತ್ ಶಾ ದರ್ಶನ ಸಿಗದೇ ರಾಜ್ಯಕ್ಕೆ ಈಶ್ವರಪ್ಪ ವಾಪಸ್ಸಾಗಿದ್ದಾರೆ. ಈ ಮೂಲಕ, ಈಶ್ವರಪ್ಪ ಮತ್ತೊಂದು ಹಿನ್ನಡೆಯನ್ನು ಎದುರಿಸುವಂತಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಈಶ್ವರಪ್ಪನವರ ಸ್ವಯಂಕೃತ ಅಪರಾಧದಿಂದಲೇ ಅಮಿತ್ ಶಾ ಅವರನ್ನು ಭೇಟಿಯಾಗಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಗೌಪ್ಯವಾಗಿ ಇರಬೇಕಾದ ವಿಚಾರವನ್ನು ಸಾರ್ವಜನಿಕವಾಗಿ ಈಶ್ವರಪ್ಪ ಹೇಳಿದ್ದರು.

ಬೆಂಗಳೂರಿನಲ್ಲಿ ಅಮಿತ್ ಶಾ ಇರುವ ವೇಳೆ ತಮ್ಮ ಜೊತೆಗೆ ಮಾತನಾಡಿದ್ದನ್ನು ಈಶ್ವರಪ್ಪ ಮಾಧ್ಯಮದವರ ಮುಂದೆ ಹೇಳಿದ್ದರು. ಯಡಿಯೂರಪ್ಪನವರ ಕುಟುಂಬದ ಜೊತೆಗಿನ ಭಿನ್ನಾಭಿಪ್ರಾಯವನ್ನು ಶಾ ಅವರಿಗೆ ವಿವರಿಸಿದ್ದೆ, ಕಾಂತೇಶನ ಭವಿಷ್ಯದ ಬಗ್ಗೆ ಅಮಿತ್ ಶಾ ಕೇಳಿದರು ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು.

ಇದಾದ ನಂತರ, ದೆಹಲಿಗೆ ಬರುವ ವಿಚಾರವನ್ನು ಗೌಪ್ಯವಾಗಿ ಇಡದೇ ಅದನ್ನೂ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದ್ದು ಅಮಿತ್ ಶಾ ಸಿಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ಸಿಗದ ನಂತರ ರಾಜ್ಯಕ್ಕೆ ವಾಪಸ್ ಬರುವ ವೇಳೆ ಮತ್ತೆ ಬಿಜೆಪಿ ವರಿಷ್ಠರ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ. ಅವರೇ ದೆಹಲಿಗೆ ಕರೆಸಿ, ಈಗ ಭೇಟಿಗೆ ಅವಕಾಶ ನೀಡುತ್ತಿಲ್ಲ, ಇದರ ಅರ್ಥ ನನ್ನ ಸ್ಪರ್ಧೆಗೆ ಅವರ ಅನುಮತಿಯಿದೆ ಎಂದು ನಾನು ಭಾವಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಚುನಾವಣೆಗೆ ಈಶ್ವರಪ್ಪ ಸ್ರ್ಪಧಿಸಲಿ, ರಾಘವೇಂದ್ರ ಸೋಲಲಿ ಎನ್ನುವ ಅಭಿಪ್ರಾಯದಲ್ಲಿ ಅಮಿತ್ ಶಾ ಇದ್ದಾರೆ. ಈ ಕಾರಣಕ್ಕೆ ಅವರು ನನ್ನನ್ನು ಭೇಟಿಯಾಗಿಲ್ಲ, ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಶಯದಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಈಶ್ವರಪ್ಪ ದೆಹಲಿಯಲ್ಲಿ ಹೇಳಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

RELATED ARTICLES

Latest News