ಬ್ರೇಕಿಂಗ್ : ಲಂಕಾ ಸ್ಫೋಟದಲ್ಲಿ ಕರ್ನಾಟಕ ಇನ್ನೂ ಮೂವರು ಸಾವು..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.23-ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಮತ್ತೆ ಮೂವರು ಸಾವನ್ನಪ್ಪಿರುವ ಮಾಹಿತಿ ವಿದೇಶಾಂಗ ಸಚಿವಾಲಯದಿಂದ ಹೊರಬಿದ್ದಿದೆ. ಇಂದು ಬೆಳಗ್ಗೆ ಶ್ರೀಲಂಕಾ ವಿದೇಶಾಂಗ ಸಚಿವಾಲಯದ ಮಾಹಿತಿ ಆಧರಿಸಿ ಭಾರತೀಯ ರಾಯಭಾರಿ ಕಚೇರಿ ಕರ್ನಾಟಕ ಸರ್ಕಾರಕ್ಕೆ ಮೂವರ ಹೆಸರನ್ನು ರವಾನಿಸಿದ್ದು, ಅವರು ರಾಜ್ಯದವರೇ ಅಥವಾ ಅಲ್ಲವೇ ಎಂಬುದು ಖಚಿತವಾಗಿಲ್ಲ.

ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್ ಮತ್ತು ರೇಮು ರೈ ತುಳಸೀರಾಮ್ ಈ ಮೂರು ಜನ ಶ್ರೀಲಂಕಾ ಸರಣಿ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ಇಂದು ಬೆಳಗ್ಗೆ ಖಚಿತಪಡಿಸಲಾಗಿದೆ. ಆದರೆ ಇವರು ಕರ್ನಾಟಕದವರೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ನಿನ್ನೆ ರಾಜ್ಯದ ಮುಖ್ಯಕಾರ್ಯದರ್ಶಿಯವರ ಕಚೇರಿಗೆ ತಲುಪಿಸಲಾದ ಮಾಹಿತಿ ಪ್ರಕಾರ ಲಕ್ಷ್ಮಿನಾರಾಯಣ, ನಾರಾಯಣಚಂದ್ರಶೇಖರ್, ಕಾಚನಹಳ್ಳಿ ಗೋವಿಂದಪ್ಪ ಹನುಮಂತರಾಯಪ್ಪ, ಮಯಿಮಪ್ಪ ರಂಗಪ್ಪ, ರಮೇಶ್ ಎಂಬುವರು ಮೃತಪಟ್ಟಿರುವುದು ಖಚಿತವಾಗಿತ್ತು.

ಅದರಲ್ಲಿ ನಾರಾಯಣಚಂದ್ರಶೇಖರ್ ಅವರು ಮಾತ್ರ ಎಲ್ಲಿಯವರು ಎಂಬುದು ಖಚಿತವಾಗಿರಲಿಲ್ಲ. ಕರ್ನಾಟಕದಲ್ಲಿ ಅವರ ಸಂಬಂಧಿಕರು, ಸ್ನೇಹಿತರು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ನಾರಾಯಣ್‍ಚಂದ್ರಶೇಖರ್ ವಿಳಾಸ ಪತ್ತೆಯಾಗಿರಲಿಲ್ಲ.

ಉಳಿದಂತೆ ಲಕ್ಷ್ಮೀನಾರಾಯಣ ಕೆ-2127874, ಹನುಮಂತರಾಯಪ್ಪ ಪಾಸ್‍ಪೋರ್ಟ್ ನಂ.ಎ-4003617, ರಂಗಪ್ಪ ಝಡ್-2400010, ರಮೇಶ್ ಎನ್-7585076 ಆಧಾರದ ಮೇಲೆ ಈ ನಾಲ್ಕು ಮಂದಿ ಕರ್ನಾಟಕದವರೇ ಎಂದು ಖಚಿತಪಡಿಸಲಾಗಿತ್ತು.

ಉಳಿದಂತೆ ಇಂದು ಬೆಳಗ್ಗೆ ಬಂದಿರುವ ಹೆಸರುಗಳ ಪೈಕಿ ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್ ಅವರ ಪಾಸ್‍ ಪೋರ್ಟ್ ನಂ. ಝಡ್-3008393 ಅವರನ್ನು ರಾಮಲಿಂಗಾರೆಡ್ಡಿ ಅವರ ಆಪ್ತ ನಾಗರಾಜ್‍ರೆಡ್ಡಿ ಎಂದು ಗುರುತಿಸಲಾಗುತ್ತಿದೆ.

ಇನ್ನು ನಿನ್ನೆ ಖಚಿತವಾಗಿರುವ ಹನುಮಂತರಾಯಪ್ಪ ಅವರ ಪಾಸ್‍ ಪೋರ್ಟ್ ನಂಬರ್ ಮತ್ತು ಇಂದು ಖಚಿತವಾಗಿರುವ ಹನುಮಯ್ಯ ಶಿವಕುಮಾರ್ (ಝಡ್-4008074 ) ಎರಡೂ ಬೇರೆ ಬೇರೆ ಇವೆ. ಹೀಗಾಗಿ ಹನುಮಂತರಾಯಪ್ಪ ಹಾಗೂ ಹನುಮಯ್ಯ ಶಿವಕುಮಾರ್ ಪಾಸ್‍ಪೋರ್ಟ್ ಬೇರೆ ಎಂದು ಭಾವಿಸಲಾಗಿದೆ.

ಇನ್ನು ರೇಮು ರೈ ತುಳಸೀರಾಮ್ ಅವರ ಪಾರ್ಸ್‍ಪೆಪೋರ್ಟ್ ಪತ್ತೆಯಾಗಿಲ್ಲ. ಹಾಗಾಗಿ ಅವರ ವಿಳಾಸವೂ ಖಚಿತಪಟ್ಟಿಲ್ಲ.
ಒಟ್ಟಾರೆ ನಿನ್ನೆಯಿಂದ ಈವರೆಗಿನ ಅಧಿಕೃತ ಮಾಹಿತಿ ಪ್ರಕಾರ ಏಳು ಮಂದಿ ರಾಜ್ಯದವರು ಶ್ರೀಲಂಕಾದ ಸರಣಿ ಸ್ಫೋಟದಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ.

ರೇಮು ರೈ ತುಳಸೀರಾಮ್ ಮತ್ತು ನಾರಾಯಣ್ ಚಂದ್ರಶೇಖರ್ ಅವರ ವಿಳಾಸ ಪತ್ತೆಯಾಗದೆ ಇರುವುದರಿಂದ ಅವರು ಎಲ್ಲಿಯವರು ಎಂದು ನಿರ್ದಿಷ್ಟವಾಗಿ ಹೇಳಲಾಗುತ್ತಿಲ್ಲ.  ಇನ್ನು ನಾಗರಾಜರೆಡ್ಡಿ ಅವರ ತಂಡದಲ್ಲಿ ಹೋಗಿದ್ದಂತಹ ಪುರುಷೋತ್ತಮ್ ರೆಡ್ಡಿ ಅವರು ಗಂಭೀರ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಉಳಿದಂತೆ ಅಡಕಮಾರನಹಳ್ಳಿ ಮಾರೇಗೌಡ, ಒರೆಕ್ಯಾತನಹಳ್ಳಿ ಪುಟ್ಟರಾಜು, ಮಂಗಳೂರಿನ ರಜೀನಾ ಮತ್ತು ನಾಗರಾಜ್ ದ್ವಾರಕಾನಾಥ್ ಅವರುಗಳು ಸರಣಿ ಬಾಂಬ್ ಸ್ಫೋಟಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ.

ಈ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು, ಅಲ್ಲಿ ಮೃತಪಟ್ಟವರನ್ನು ಗುರುತಿಸುವುದು ಹಾಗೂ ಪುನರ್ವಸತಿ ಕಾರ್ಯದಲ್ಲಿ ಅಧಿಕಾರಿಗಳು ಹೆಚ್ಚಾಗಿ ನಿರತರಾಗಿದ್ದು, ಸಾವನ್ನಪ್ಪಿರುವವರ ಮಾಹಿತಿ ಪಡೆದುಕೊಳ್ಳಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ.

ನೇರವಾಗಿ ಶ್ರೀಲಂಕಾ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ರಾಯಭಾರಿ ಕಚೇರಿ ಮೂಲಕವೇ ಸಂಪರ್ಕ ಸಾಧಿಸಬೇಕಿದೆ. ಹೀಗಾಗಿ ಪ್ರತಿಕ್ಷಣವೂ ಅಧಿಕಾರಿಗಳು ಮಾಹಿತಿಗಾಗಿ ಕಾದು ಕುಳಿತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin