BIG NEWS : ಅಧಿಕಾರಕ್ಕೇರಲು ಬಿಜೆಪಿಯಿಂದ ‘ಸರ್ಜಿಕಲ್ ಸ್ಟ್ರೈಕ್’, ಕಾಂಗ್ರೆಸ್ ಶಾಸಕರಿಗೆ ಗಾಳ..!

ಈ ಸುದ್ದಿಯನ್ನು ಶೇರ್ ಮಾಡಿ

BJP-Operation--01

ಬೆಂಗಳೂರು, ಮೇ16-ವಿಧಾನಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ್ದರೂ ಸರ್ಕಾರ ರಚನೆಗೆ ಕೆಲವೇ ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿ ಇದೀಗ ಪುನಃ ಆಪರೇಷನ್ ಕಮಲಕ್ಕೆ ಕೈ ಹಾಕಿದೆ. ಕಾಂಗ್ರೆಸ್‍ನ ಕೆಲವು ಶಾಸಕರನ್ನು ಕಳೆದ ರಾತ್ರಿಯಿಂದಲೇ ಸಂಪರ್ಕಿಸಿರುವ ಬಿಜೆಪಿ ಮುಖಂಡರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸರ್ಕಾರ ರಚಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.

ವಿಶೇಷವಾಗಿ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಕೆಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿರುವ ಬಿಜೆಪಿ ಪ್ರಭಾವಿ ಮುಖಂಡರೊಬ್ಬರು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ನೀಡಿದ್ದಾರೆ. ಶಾಸಕರಾದ ಶಿವಾನಂದ ಪಾಟೀಲ್(ಬಸವನಬಾಗೇವಾಡಿ), ಸಿದ್ದು ನ್ಯಾಮೇಗೌಡ(ಜಮಖಂಡಿ), ಅಮರೇಗೌಡ ಬೈಯ್ಯಾಪುರ(ಕುಷ್ಟಗಿ), ವೆಂಕಟರಾವ್ ನಾಡಗೌಡ(ಸಿಂಧನೂರು), ಪ್ರತಾಪ್ ಗೌಡ(ಮಸ್ಕಿ), ರಾಜಶೇಖರ್ ಪಾಟೀಲ್( ಹುಮ್ನಾನಾಬಾದ್), ಶರಣಬಸಪ್ಪ (ದರ್ಶನಪುರ), ಆನಂದ್‍ಸಿಂಗ್(ವಿಜಯನಗರ), ನಾಗೇಂದ್ರ(ಬಳ್ಳಾರಿ ಗ್ರಾಮೀಣ), ಜೆ.ಎನ್.ಗಣೇಶ್(ಕಂಪ್ಲಿ) ಅವರುಗಳನ್ನು ಸೆಳೆಯಲು ಮುಂದಾಗಿದೆ.

ಪಕ್ಷೇತರ ಶಾಸಕರಾದ ಆರ್.ಶಂಕರ್ ಈಗಾಗಲೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರೆ ಮುಳಬಾಗಿಲ ನಾಗೇಶ್ ಅವರನ್ನು ಬಿಜೆಪಿಗೆ ಕರೆತರಲು ಬೆಂಗಳೂರು ಮೂಲದ ಪ್ರಭಾವಿ ಮುಖಂಡರೊಬ್ಬರು ಮುಂದಾಗಿದ್ದಾರೆ. ಇದರಲ್ಲಿ ಬಿ.ನಾಗೇಂದ್ರ ಅವರನ್ನು ಬಿಜೆಪಿಗೆ ಕರೆತರಲು ಆಂಧ್ರಪ್ರದೇಶದ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಜಗಮೋಹನ್ ರೆಡ್ಡಿ ಅಖಾಡಕ್ಕಿಳಿದಿದ್ದಾರೆ.
ಆಂಧ್ರ ಪ್ರದೇಶದಲ್ಲಿ ನಾಗೇಂದ್ರ ಅವರ ಸಹೋದರ ವೈಎಸ್‍ಆರ್ ಪಕ್ಷದಿಂದ ಶಾಸಕರಾಗಿದ್ದಾರೆ. ಬಿಜೆಪಿಗೆ ಹೋಗಲು ವೇದಿಕೆಯನ್ನು ಸಿದ್ಧಪಡಿಸಬೇಕೆಂದು ಸೂಚಿಸಲಾಗಿದೆ. ನಾಗೇಂದ್ರ ಬಿಜೆಪಿಗೆ ಹೋದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಅವನ ಸಹೋದರನಿಗೆ ಜಗನ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಆನಂದ್ ಸಿಂಗ್ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಮಾತೃ ಪಕ್ಷಕ್ಕೆ ಬರುವಂತೆ ಅವರನ್ನು ಬಳ್ಳಾರಿ ಮೂಲದ ಪ್ರಭಾವಿ ನಾಯಕರೊಬ್ಬರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉಪಚುನಾವಣೆಯಲ್ಲಿ ಗೆಲ್ಲಿಸುವ ಹೊಣೆಗಾರಿಕೆ ಹಾಗೂ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡಲಾಗಿದೆ.
ಆದರೆ ಇಷ್ಟು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಉಪಚುನಾವಣೆಗೆ ಸಜ್ಜಾಗಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ಈ ಹಿಂದೆ 2008ರಲ್ಲಿ ಆಪರೇಷನ್ ಕಮಲ ನಡೆದಾಗ ರಾಷ್ಟ್ರಮಟ್ಟದಲ್ಲಿ ವಿವಾದವಾಗಿತ್ತು. ಅಲ್ಲದೆ ಕೆಲ ಶಾಸಕರಿಗೆ ಮತದಾರರು ಸೋಲಿನ ರುಚಿ ಉಣಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin