ಸಿಜೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ವಕೀಲನಿಗೆ ಸುಪ್ರೀಂ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.23-ಲೈಂಗಿಕ ಕಿರುಕುಳ ಸುಳ್ಳು ಆರೋಪ ಹೊರಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜೀನಾಮೆ ನೀಡುವಂತೆ ಮಾಡಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಹೇಳಿಕೆ ನೀಡಿದ್ದ ವಕೀಲರಿಗೆ ಸರ್ವೋಚ್ಚ ನ್ಯಾಯಾಲಯ ಇಂದು ನೋಟೀಸ್ ಜಾರಿಗೊಳಿಸಿ ಪ್ರತ್ಯುತ್ತರ ಕೋರಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠ ಇಂದು ಈ ಸಂಬಂಧ ಹಿರಿಯ ವಕೀಲ ಉತ್ಸವ್‍ಸಿಂಗ್ ಬೈನ್ಸ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಅವರು ನೀಡಿರುವ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.

ನವದೆಹಲಿಯ ಪ್ರೆಸ್‍ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ವಕೀಲ ಉತ್ಸವ್‍ಸಿಂಗ್, ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲು ಸುಪ್ರೀಂಕೋರ್ಟ್‍ನ ವಜಾಗೊಂಡ ಮಹಿಳೆಗೆ 1.5 ಕೋಟಿ ರೂ. ಹಣವನ್ನೂ ಸಹ ನೀಡಲಾಗಿದೆ ಎಂದು ಹೇಳಿದ್ದರು.

ಅವರ ಈ ಎಲ್ಲ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಇಂದು ನೋಟೀಸ್ ಜಾರಿಗೊಳಿಸಿ ಪ್ರತ್ಯುತ್ತರ ಕೋರಿದೆ.
ಸಾರ್ವಜನಿಕ ಪ್ರಕರಣಗಳ ಕುರಿತು ದಾಖಲಾಗಿರುವ ಇಂತಹ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸಲಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )