ಲೋಕಸಭಾ ಚುನಾವಣೆ-2019 – ಮೊದಲ ಹಂತದ ಮತದಾನ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.18- ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವೆಂದೇ ಬಿಂಬಿತವಾಗಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ನಿರೀಕ್ಷೆಗೂ ಮೀರಿದ ಮತದಾನ ನಡೆಯುವ ಸಾಧ್ಯತೆ ಇದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕೈಕೊಟ್ಟ ಮತಯಂತ್ರಗಳು, ನಕಲಿ ಮತದಾನಕ್ಕೆ ಯತ್ನ ಕೆಲವೆಡೆ ನಡೆದಿದ್ದು,
ಉಳಿದಂತೆ ಎಲ್ಲೆಡೆ ಮತದಾನಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಪ್ರಾರಂಭದಲ್ಲೇ ನಿರೀಕ್ಷೆಗೂ ಮೀರಿದ ಉತ್ಸಾಹ ಕಂಡುಬಂದಿತು. ಹಿರಿಯರು, ಕಿರಿಯರು, ಯುವ ಮತದಾರರು, ವಯೋವೃದ್ಧರು ಬೆಳಗ್ಗೆಯಿಂದಲೇ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಪ್ರಜಾಪ್ರಭುತ್ವದ ಹಬ್ಬವೆಂದೇ ಪರಿಗಣಿತವಾದ ಈ ಚುನಾವಣೆಯಲ್ಲಿ ಬೆಂಗಳೂರಿನ ಗೌರಮ್ಮ ಎಂಬ 105 ವರ್ಷದ ವಯೋವೃದ್ಧೆ ಒಂದು ಕಿಲೋ ಮೀಟರ್ ನಡೆದುಕೊಂಡೇ ಬಂದು ಮತದಾನ ಮಾಡಿದ್ದು ಮತದಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಸಾರಿ ಹೇಳುವಂತಿತ್ತು.

ನಿನ್ನೆ ರಾತ್ರಿ ಕೆಲವು ಕಡೆ ಮಳೆ ಸುರಿದ ಪರಿಣಾಮ ಇಂದು ಅಷ್ಟು ಬಿಸಿಲಿನ ತಾಪ ಇರಲಿಲ್ಲ. ಪರಿಣಾಮ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದಲೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತಗಟ್ಟೆ ಅಧಿಕಾರಿ ಸಾವು: ಚಾಮರಾಜನಗರ ಜಿಲ್ಲೆ ಯಳಂದೂರು ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ (48) ಎಂಬುವವರು ಬೆಳಗ್ಗೆ ಹೃದಯಾಘಾತವಾಗಿ ಮತಗಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ.

ಇವರು ಹನೂರಿನ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಗಾಳಿ ಆಂಜನೇಯ ಕ್ಷೇತ್ರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬಂದಿದ್ದ ರಾಮಚಂದ್ರ ಎಂಬುವವರಿಗೆ ಸರದಿಯಲ್ಲಿ ನಿಂತ ವೇಳೆ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತದಾನ ಬಹಿಷ್ಕಾರ: ಇನ್ನು ಮತದಾನದ ವೇಳೆ ಕೆಲವು ಕಡೆ ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಅಲ್ಲಲ್ಲಿ ಮತದಾನ ಬಹಿಷ್ಕರಿಸಿರುವ ಘಟನೆಗಳೂ ಜರುಗಿವೆ.  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗ್ರಾಮವಾದ ನಗರಘಟ್ಟದಲ್ಲಿ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯ ನೀಡದೆ ಗ್ರಾಮಸ್ಥರು ಪರದಾಡುತ್ತಿದ್ದರೂ ಇತ್ತಕಡೆ ಯಾರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮತದಾನ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಚಿತ್ರಹಳ್ಳಿ ಪೊಲೀಸರು ಗ್ರಾಮಸ್ಥರ ಮನವೊಲಿಸುವಲ್ಲಿ ನಿರತರಾಗಿದ್ದುದು ಕಂಡುಬಂದಿತು.  ಇದೇ ರೀತಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕ ಬೇಡಗೆರೆ ಗ್ರಾಮಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಜಿಪಂ ಹಾಗೂ ಗ್ರಾಪಂ ಸದಸ್ಯರು ಚಿಕ್ಕ ಬೇಡಗೆರೆ ಗ್ರಾಮದ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಮತಗಟ್ಟೆ ಸಂಖ್ಯೆ 118ರ ಬಳಿ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ ಹಾಗೂ ಬಂಟೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ ಅವರ ಪತಿ ದಾಸಪ್ಪ ಸ್ಥಳಕ್ಕಾಗಮಿಸಿ ಮನವೊಲಿಸಲು ಯತ್ನಿಸಿದರಾದರೂ ಫಲಿಸಲಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಕಾಗನಪಲ್ಲಿಯಲ್ಲೂ ಮತದಾರರು ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದರು.ಇನ್ನೊಂದೆಡೆ ಇಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮಹಿಳೆಯೊಬ್ಬರು ಕಮಲದ ಚಿಹ್ನೆ ಇರುವ ಸೀರೆ ಧರಿಸಿ ಮತ ಚಲಾಯಿಸಲು ಬಂದಿದ್ದರು.

 

ಕೈಕೊಟ್ಟ ಮತಯಂತ್ರಗಳು: ಮತದಾನದ ವೇಳೆ ಕೆಲವು ಕಡೆ ವಿದ್ಯುನ್ಮಾನ ಯಂತ್ರಗಳು ಕೈಕೊಟ್ಟ ಪರಿಣಾಮ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಮತದಾರರು ಕೂಡ ಗೊಂದಲಕ್ಕೆ ಒಳಗಾಗಿದ್ದರು. ತಕ್ಷಣವೇ ಸಿಬ್ಬಂದಿ ಯಂತ್ರವನ್ನು ಸರಿಪಡಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಮಾತಿನ ಚಕಮಕಿ: ಮತ ಚಲಾಯಿಸುವ ವೇಳೆ ಅಲ್ಲಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ನಕಲಿ ಮತದಾರರ ಸೇರ್ಪಡೆ, ಮತಪಟ್ಟಿಯಿಂದಲೇ ಹೆಸರು ನಾಪತ್ತೆ, ಬೇರೊಬ್ಬರ ಹೆಸರಿನಲ್ಲಿ ಮತದಾನ, ಮತಗಟ್ಟೆ ಸಮೀಪ ಮತದಾರರಿಗೆ ಆಮಿಷ ಇಂತಹ ಕಾರಣಗಳಿಂದಲೇ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದು ಮಾತಿನ ಚಕಮಕಿಯೂ ನಡೆದಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರ ನಿವಾಸಿ ದೇವರಾಜ್ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ಮತ ಚಲಾಯಿಸಿದ್ದರಿಂದ ಕೆಲಕಾಲ ಮತಗಟ್ಟೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೇ ರೀತಿ ನಾಗರಬಾವಿಯಲ್ಲಿ 384 ಮತದಾರರ ಹೆಸರುಗಳು ಪಟ್ಟಿಯಿಂದಲೇ ನಾಪತ್ತೆಯಾದ ಘಟನೆಯೂ ನಡೆದಿದೆ. ಯಲಹಂಕದ ಕೆಲವು ಕಡೆ ಆಂಧ್ರದ ಮೂಲದವರು ನಕಲಿ ಮತ ಚಲಾಯಿಸಲು ಬಂದು ಸಿಕ್ಕಿಹಾಕಿಕೊಂಡಿದ್ದಾರೆಂದು ತಿಳಿದುಬಂದಿದೆ.ಮತ ಚಲಾಯಿಸಿದ ವಧು-ವರರು: ಮತದಾನದ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಡ್ಪಲ್ತಡ್ಕದಲ್ಲಿ ನವ ದಂಪತಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

ಘಟಾನುಘಟಿಗಳ ಹಣೆಬರಹ ನಿರ್ಧಾರ: ಇಂದು ನಡೆದ 14 ಲೋಕಸಭಾ ಕ್ಷೇತ್ರಗಳ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ನ ಘಟಾನುಘಟಿ ಮುಖಂಡರ ರಾಜಕೀಯ ಭವಿಷ್ಯವನ್ನು ಮತದಾರ ಮತಗಟ್ಟೆ ಯಂತ್ರದಲ್ಲಿ ಬರೆದಿದ್ದಾನೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (ತುಮಕೂರು), ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ (ಬೆಂಗಳೂರು ಉತ್ತರ), ಸಚಿವ ಕೃಷ್ಣಭೈರೇಗೌಡ (ಬೆಂಗಳೂರು ಉತ್ತರ), ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಮಂಡ್ಯ), ಚಿತ್ರನಟಿ, ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ (ಮಂಡ್ಯ), ಪ್ರಜ್ವಲ್ ರೇವಣ್ಣ (ಹಾಸನ), ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ಬಿ.ಕೆ.ಹರಿಪ್ರಸಾದ್ (ಬೆಂಗಳೂರು ದಕ್ಷಿಣ), ವೀರಪ್ಪಮೊಯ್ಲಿ (ಚಿಕ್ಕಬಳ್ಳಾಪುರ), ಕೆ.ಎಚ್.ಮುನಿಯಪ್ಪ (ಕೋಲಾರ), ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು) ಸೇರಿದಂತೆ ಅನೇಕರ ರಾಜಕೀಯ ಭವಿಷ್ಯ ತೀರ್ಮಾನವಾಗಿದೆ.ಒಟ್ಟು 2 ಕೋಟಿ 68 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾ ಆಯೋಗ, ಸಂಘ-ಸಂಸ್ಥೆಗಳು ಹಾಗೂ ರಾಯಭಾರಿಗಳ ಮೂಲಕ ನಡೆಸಿದ ಪ್ರಚಾರ ಈ ಚುನಾವಣೆಯಲ್ಲಿ ಫಲಪ್ರದವಾಗಿದೆ.

ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ 10, ಜೆಡಿಎಸ್‍ನಿಂದ 4, ಬಿಜೆಪಿಯಿಂದ 13 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 30,164 ಮತಗಟ್ಟೆಗಳಿವೆ. 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ಮತಗಟ್ಟೆಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 5,10,59,103 ಮತದಾರರಿದ್ದು, ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದವರ ಸಂಖ್ಯೆ 10,09,167. ಮೊದಲ ಹಂತದ 14 ಕ್ಷೇತ್ರಗಳಲ್ಲಿ 2,67,51,893 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

# ಹೃದಯಾಘಾತ: ಮತಗಟ್ಟೆ ಅಧಿಕಾರಿ ಸಾವು
ಚಾಮರಾಜನಗರ, ಏ.18- ಲೋಕಸಭಾ ಚುನಾವಣೆ ನಿಮಿತ್ತ ನಿಯೋಜನೆಗೊಂಡಿದ್ದ ಹೆಚ್ಚುವರಿ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಹನೂರು ಕಾಲೇಜಿನ ಪ್ರಾಂಶುಪಾಲ ಶಾಂತಮೂರ್ತಿ (48) ಮೃತಪಟ್ಟ ಅಧಿಕಾರಿ. ಚುನಾವಣೆ ನಿಮಿತ್ತ ಇಂದು ಬೆಳಗ್ಗೆ ಚಾಮರಾಜನಗರದ ಸುಲ್ತಾನ್ ಷರೀಫ್ ಸರ್ಕಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಈ ಸಂದರ್ಭದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

# ಶಾಂತಿಯುತ ಮತದಾನ: ಕಮಲ್ ಪಂಥ್
ಬೆಂಗಳೂರು, ಏ.18- ಒಂದನೇ ಹಂತದ 14 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕಮಲ್ ಪಂಥ್ ಇಂದಿಲ್ಲಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅಲ್ಲಲ್ಲಿ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.  ಮತಗಟ್ಟೆ ಕೇಂದ್ರಗಳ ಬಳಿ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತಿನಲ್ಲಿ ಇದ್ದಾರೆ. ಮತದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

# ಅಲ್ಲಲ್ಲಿ ಕೈ ಕೊಟ್ಟ ಮತಯಂತ್ರಗಳು : 
ಚಿಕ್ಕಮಗಳೂರು, ಏ.11- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿಂದು ನಡೆದ ಮತದಾನದಲ್ಲಿ ಅಲ್ಲಲ್ಲಿ ಮತಯಂತ್ರಗಳು ಕೈ ಕೊಟ್ಟ ಪ್ರಸಂಗ ನಡೆದಿದೆ. ದಜ್ಜಿ ಬೀದಿಯಲ್ಲಿರುವ 164ನೇ ಸಂಖ್ಯೆಯ ಮತಗಟ್ಟೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮತಯಂತ್ರ ಸರಿಪಡಿಸಲಾಗದೆ ಮತದಾರರು ಮತ ಚಲಾಯಿಸಲು ಸಾಲುಗಟ್ಟಿ ನಿಲ್ಲಬೇಕಾಯಿತು.

ಈ ವಿಷಯ ತಿಳಿದ ಶಾಸಕ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಗಮನಕ್ಕೆ ತಂದರು. ಆದರೆ, ಮತ ಯಂತ್ರ ಸರಿಪಡಿಸಲು ಸಾಧ್ಯವಾಗದೆ ಬೇರೊಂದು ಯಂತ್ರವನ್ನು ತಂದು ಮತಚಲಾಯಿಸಲು ಅನುವು ಮಾಡಿಕೊಡಲಾಯಿತು. ಬೆಳಗ್ಗೆ 7 ಗಂಟೆಗೆ ಶುರುವಾಗಬೇಕಾದ ಮತದಾನ 8.30ರಿಂದ ಆರಂಭವಾಗಿದ್ದರಿಂದ ಮತದಾರರು ಕೆಲ ಕಾಲ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಡಿಎಸಿಜಿ ಪಾಲಿಟೆಕ್ನಿಕ್‍ನ 199ನೇ ಸಂಖ್ಯೆಯ ಮತಗಟ್ಟೆಯಲ್ಲೂ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮತದಾನಕ್ಕೆ ಅಡ್ಡಿಯುಂಟಾಯಿತು.

ಸಾಲು ಸಾಲು ರಜೆ ಇರುವುದರಿಂದ ಸಾರ್ವಜನಿಕರು ಬೆಳಗ್ಗೆ 6.30ಕ್ಕೇ ಮತಗಟ್ಟೆ ಬಂದು ಮತ ಚಲಾಯಿಸಲು ಕಾದು ನಿಂತಿದ್ದರು. ಬೆಳಗ್ಗೆ 10 ಗಂಟೆ ನಂತರ ಬಿಸಿಲು ಹೆಚ್ಚಾಗುವುದರಿಂದ ಹಾಗೂ ಮತದಾನ ಮಾಡಿ ಪ್ರವಾಸ ಮಾಡಬಹುದು ಎಂಬ ಉದ್ದೇಶದಿಂದ ಮತದಾರರು ಬೆಳಗ್ಗೆಯೇ ಮತಗಟ್ಟೆಯತ್ತ ದಾವಿಸಿದ್ದರು.

ಚುನಾವಣೆಗೆ 280 ಕೆಎಸ್‍ಆರ್‍ಟಿಸಿ ಬಸ್ ಹಾಗೂ 65 ಖಾಸಗಿ ಬಸ್‍ಗಳನ್ನು ಅಲ್ಲದೆ ಜೀಪು, ಆಟೋ, ಕಾರುಗಳನ್ನು ನಿಯೋಜನೆಗೊಂಡಿದ್ದವು. ಇದರಿಂದ ಹೊರ ಊರಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

 

# ಮತದಾನಕ್ಕೆ ಬಹಿಷ್ಕಾರ: ಪೊಲೀಸರ ಮನವೊಲಿಕೆ
ಚಿತ್ರದುರ್ಗ, ಏ.18- ಮೂಲಭೂತ ಸೌಕರ್ಯ ಒದಗಿಸಿಲ್ಲವೆಂದು ಆಕ್ರೋಶಗೊಂಡ ನಗರಘಟ್ಟದ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದು ಕಂಡುಬಂದಿತು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗ್ರಾಮವಾದ ನಗರಘಟ್ಟದಲ್ಲಿ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯ ನೀಡದೆ ಗ್ರಾಮಸ್ಥರು ಪರದಾಡುತ್ತಿದ್ದರೂ ಇತ್ತಕಡೆ ಯಾರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮತದಾನ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಚಿತ್ರಹಳ್ಳಿ ಪೊಲೀಸರು ಗ್ರಾಮಸ್ಥರ ಮನವೊಲಿಸುವಲ್ಲಿ ನಿರತರಾಗಿದ್ದುದು ಕಂಡುಬಂದಿತು.

 

# ಮತಯಂತ್ರ ದೋಷ: 2 ಗಂಟೆ ನಂತರ ಮತದಾನ ಆರಂಭ
ಅರಕಲಗೂಡು, ಏ.18- ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಬೆಳಗ್ಗೆಯೇ ತಾಲೂಕಿನ ಕಟ್ಟೇಪುರ ಮತಗಟ್ಟೆಗೆ ಮತದಾರರು ಬಂದರಾದರೂ ಇವಿಎಂ ದೋಷದಿಂದಾಗಿ ಎರಡು ಗಂಟೆಗೂ ಹೆಚ್ಚುಕಾಲ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದ್ದು ಕಂಡುಬಂತು.

ಬೆಳಗ್ಗೆಯೇ ಹುಮ್ಮಸ್ಸಿನಿಂದ ಮತದಾರರು ತಮ್ಮ ವೋಟರ್ ಐಡಿಯೊಂದಿಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಇವಿಎಂ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ನಿಗದಿತ ಸಮಯದಲ್ಲಿ ಮತದಾನಕ್ಕೆ ಅವಕಾಶ ಸಿಗದೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.

ವಿಷಯ ತಿಳಿದ ಬಿಜೆಪಿ ಅಭ್ಯರ್ಥಿ ಮಂಜು ಮತಗಟ್ಟೆಗೆ ಆಗಮಿಸಿ ಮತಗಟ್ಟೆ ಅಧಿಕಾರಿ ಜತೆ ವಾಗ್ವಾದ ನಡೆಸಿದರು. ಮತಗಟ್ಟೆ ಅಧಿಕಾರಿಗಳು ಇವಿಎಂ ಮತಯಂತ್ರವನ್ನು ಸರಿಪಡಿಸಿದ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

 

 

 

# ತುಮಕೂರಿನಲ್ಲಿ ಸಂತಸದ ಮತದಾನ:ಜಿ.ಎಸ್.ಬಸವರಾಜ್
ತುಮಕೂರು, ಏ. 18- ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ನಡೆದಿದೆ. ಯುವಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ನಗರ ಪ್ರದೇಶದಲ್ಲಿ ಮತದಾನ ನಿಧಾನವಾಗಿ ಪ್ರಾರಂಭವಾಯಿತು. ಆದರೆ ಗ್ರಾಮೀಣ ಭಾಗದಲ್ಲಿ ಬೆಳಗಿನಿಂದಲೆ ಜನರು ಮತದಾನ ಮಾಡಲು ಉತ್ಸುಕರಾಗಿದ್ದುದು ನಿಜಕ್ಕೂ ಖುಷಿಯ ವಿಚಾರ ಎಂದರು.

ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಐಕ್ಯತೆಗೆ ಹಾಗೂ ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲಲು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಆಶಿಸಿದರು.

ನಾನು ನಿರಂತರವಾಗಿ ಜಿಲ್ಲೆಗೆ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಈ ಬಾರಿ ನಾನು ಗೆದ್ದು ಬಂದರೆ ಜಿಲ್ಲೆಯನ್ನು ಮಾದರಿಯಾಗಿ ಮಾಡುತ್ತೇನೆ. ನೀರಾವರಿ ಯೋಜನೆ ಜಾರಿಗೆ ತಂದು ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಜಿ.ಎಸ್. ಬಸವರಾಜು ತಿಳಿಸಿದರು.

 

Facebook Comments