ಮೇ 19ರಂದು ಫೈನಲ್ ಫೈಟ್, ಮೋದಿ ಸೇರಿ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 16-ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ಕೊನೆ ಹಂತಕ್ಕೆ ಮೇ 19ರಂದು ಮತದಾನ ನಡೆಯಲಿದ್ದು, ನಾಳೆ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಕಾರ್ಯವನ್ನು ಒಂದು ದಿನ ಮುಂಚಿತವಾಗಿ ಮೊಟಕುಗೊಳಿಸಲಾಗಿದೆ.  ಎಂಟು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.

ಕೇಂದ್ರ ಚುನಾವಣಾ ಆಯೋಗ ನಿನ್ನೆಯಷ್ಟೇ ಆಯಾ ರಾಜ್ಯಗಳು ಚುನಾವಣಾ ವೀಕ್ಷಕರು ಮತ್ತು ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ನಡೆಸಿತ್ತು.  ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರಾದೇಶಿಕ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಓಲೈಸುವ ಕಸರತ್ತು ನಡೆಸಿವೆ.

ಭಾನುವಾರ ಎಂಟು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ (13 ಲೋಕಸಭಾ ಕ್ಷೇತ್ರಗಳು), ಪಂಜಾಬ್(13), ಪಶ್ಚಿಮ ಬಂಗಾಳ(9), ಮಧ್ಯಪ್ರದೇಶ(8), ಬಿಹಾರ(8), ಹಿಮಾಚಲ ಪ್ರದೇಶ(4), ಜಾರ್ಖಂಡ್(3) ಹಾಗೂ ಚಂಡೀಗಢ(1) ಈ ರಾಜ್ಯಗಳಲ್ಲಿ ಮತದಾನವಾಗಲಿದೆ. ಪ್ರಧಾನಿ ನರೇಂದ್ರ ಮೋದಿ(ವಾರಣಾಸಿ) ಸೇರಿದಂತೆ ಘಟಾನುಘಟಿಗಳು ಸ್ಫರ್ಧಾ ಕಣದಲ್ಲಿದ್ದಾರೆ.

ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಆಧ್ಯಕ್ಷ ರಾಹುಲ್‍ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಹು ಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್, ಪಂಜಾಬ್ ಸಿಎಂ ಅಮರಿಂದರ್‍ಸಿಂಗ್ ಸೇರಿದಂತೆ ಅನೇಕ ತಾರಾ ಪ್ರಚಾರಕರು ಏಳನೆ ಹಂತದ ಚುನಾವಣೆಗಾಗಿ ಆಯಾ ರಾಜ್ಯಗಳಲ್ಲಿ ಪ್ರವಾಸ ಮಾಡಿ ಭರ್ಜರಿ ರೋಡ್‍ಶೋ ಮತ್ತು ರ್ಯಾಲಿಗಳನ್ನು ನಡೆಸಿ ತಮ್ಮ ಪಕ್ಷಗಳ ಪರ ಮತ ಯಾಚಿಸಿದರು.

ಪಶ್ಚಿಮ ಬಂಗಾಳದಲ್ಲಿ ನಾಳೆ ಬದಲು ಇಂದು ರಾತ್ರಿ ಬಹಿರಂಗ ಪ್ರಚಾರಕ್ಕೆ ಆಯೋಗ ತೆರ ಎಳೆಯಲಿದೆ. ಪ್ರಧಾನಿ ಮೋದಿ ಇಂದು ಪಶ್ಚಿಮ ಬಂಗಾಳದ ಮಥುರಾಪುರ್ ಮತ್ತು ಡುಮ್ ಡುಮ್‍ನಲ್ಲಿ ಇಂದು ಸಂಜೆ ಎರಡು ಬೃಹತ್ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನಜಿ ಅವರೂ ಕೂಡ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿದೆ.

ಈಗಾಗಲೇ ನಡೆದ ಎಲ್ಲ ಆರು ಹಂತಗಳ ಚುನಾವಣೆ ಸಂದರ್ಭಗಳಲ್ಲೂ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಏಳನೆ ಹಂತದ ಮತದಾನಕ್ಕೆ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಏಳನೆ ಹಂತದ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಬಂದೋಬಸ್ತ್ ಮಾಡಲಾಗಿದೆ. ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin