ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಟಿಕೆಟ್ ನೀಡಲು ಮೋದಿ ಕೊಟ್ಟ ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.20- ಹಿಂದೂ ಭಯೋತ್ಪಾದಕರು ಮತ್ತು ಕೇಸರಿ ಭಯೋತ್ಪಾದನೆ ಎಂದು ಹೇಳುತ್ತಿದ್ದ ಕಾಂಗ್ರೆಸ್‍ಗೆ ತಿರುಗೇಟು ನೀಡುವ ಕಾರಣಕ್ಕಾಗಿಯೇ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಭೂಪಾಲ್‍ನಿಂದ ಕಣಕ್ಕಿಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ನೀಡುವಾಗ ಸಾಕಷ್ಟು ಬಾರಿ ಆಲೋಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇಶದಲ್ಲಿ ಹಿಂದೂ ಭಯೋತ್ಪಾದಕರು ಕೇಸರಿ ಭಯೋತ್ಪಾದಕರು ಎಂದು ಟೀಕಿಸುವ ಮೂಲಕ ಹಿಂದೂಗಳಿಗೆ ಅವಮಾನ ಮಾಡುತ್ತಿದ್ದ ಕಾಂಗ್ರೆಸ್‍ಗೆ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕಿಳಿದಿರುವುದು ನುಂಗಲಾರದ ತುತ್ತಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲಿರುವ ನರೇಂದ್ರಮೋದಿ, ಈ ಚುನಾವಣೆ ವ್ಯಕ್ತಿ ಆಧಾರಿತ ಇಲ್ಲವೇ ಯಾವುದೋ ಕುಟುಂಬದ ವಿರುದ್ಧ ನಡೆಯುತ್ತಿರುವ ಚುನಾವಣೆಯಲ್ಲ. ದೇಶದ ಭದ್ರತೆ, ಅಭಿವೃದ್ಧಿ ಸೇರಿದಂತೆ ಹಲವು ಮಾನದಂಡಗಳ ಮೇಲೆ ನಡೆಯುತ್ತಿರುವುದರಿಂದ ಇಡೀ ವಿಶ್ವವೇ ಭಾರತದ ಚುನಾವಣೆಯತ್ತ ಗಮನಹರಿಸಿದೆ ಎಂದಿದ್ದಾರೆ.

1984ರಲ್ಲಿ ಇಂದಿರಾಗಾಂಧಿ ಹತ್ಯೆಯಾದ ವೇಳೆ ದೇಶಾದ್ಯಂತ ಸಿಖ್ ಸಮುದಾಯದ ಮೇಲೆ ಮಾರಣ ಹೋಮ ನಡೆಯಿತು. ಅಂದು ಅವರ ಮಗ ರಾಜೀವ್ ಗಾಂಧಿ ಒಂದು ದೊಡ್ಡ ಆಲದ ಮರ ಬಿದ್ದಾಗ ನೆಲ ನಡುಗುವುದು ಸಾಮಾನ್ಯ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದರು ಎಂದು ಪ್ರಧಾನಿ ಆರೋಪಿಸಿದರು.

ಈಗಲೂ ಕೂಡ ಸಾವಿರಾರು ಸಿಖ್ ಕುಟುಂಬಗಳು ನ್ಯಾಯ ಸಿಗದೆ ಸಂತ್ರಸ್ತರಾಗಿದ್ದಾರೆ. ಈ ಘಟನೆಯಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರೂ ಅವರ್ಯಾರನ್ನೂ ವಿಚಾರಣೆಯನ್ನೇ ಮಾಡಲಿಲ್ಲ. ವ್ಯವಸ್ಥಿತವಾಗಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ಕೊಡಬೇಕಾಗಿದ್ದ ಅಂದಿನ ಆಡಳಿತಾರೂಢ ಕಾಂಗ್ರೆಸ್, ತಮ್ಮ ಪಕ್ಷದ ಮುಖಂಡರನ್ನು ರಕ್ಷಣೆ ಮಾಡಿತು. ಕೇಂದ್ರದಲ್ಲಿ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅಧಿಕಾರಕ್ಕೆ ಬಂದ ನಂತರ ತನಿಖೆಗೆ ಆದೇಶಿಸಿದರು. ಅದರ ಪರಿಣಾಮವೇ ಸಜ್ಜನ್‍ಕುಮಾರ್ ಅಂಥವರು ಶಿಕ್ಷೆ ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.

ತಪ್ಪು ಮಾಡಿ ಜೈಲಿಗೆ ಹೋದವರನ್ನು ಅಲ್ಲಿ ಭೇಟಿ ಮಾಡಿ ತಬ್ಬಿಕೊಂಡು ಬಂದವರು ನ್ಯಾಯದ ಪರವಾಗಿ ಮಾತನಾಡುತ್ತಾರೆ. ಏನೂ ಆಗದಿದ್ದರೂ ಆಸ್ಪತ್ರೆಗೆ ದಾಖಲಾಗಿದ್ದವರನ್ನೂ ಸಹ ಭೇಟಿಯಾಗಿದ್ದರು.

ನನ್ನನ್ನು ಭ್ರಷ್ಟ ಎಂದು ಮಾತನಾಡುವ ಅಮೇಥಿ ಮತ್ತು ರಾಯಬರೇಲಿ ಸಂಸದರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಾಯಿ ಮತ್ತು ಮಗ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ ಎಂದು ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಯಾವ ಹಂತಕ್ಕೆ ಇಳಿದಿದೆ ಎಂದರೆ ಸಹಜವಾಗಿ ಸಾವನ್ನಪ್ಪಿದ್ದ ನಿವೃತ್ತ ನ್ಯಾಯಮೂರ್ತಿ ಲೋಯ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಯಿತು. ಈಗಲೂ ಅಷ್ಟೇ ಆ ಪಕ್ಷದವರು ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲಾಗದೆ ವಾಮ ಮಾರ್ಗದಲ್ಲಿ ಗೆಲ್ಲುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

ಸಿಬಿಐ , ಇಡಿ, ಐಟಿ ಸಂಸ್ಥೆಗಳನ್ನು ಕಾಂಗ್ರೆಸ್ ರೀತಿ ಈ ದೇಶದಲ್ಲಿ ಆಡಳಿತ ನಡೆಸಿದ ಯಾವ ಪಕ್ಷಗಳು ಕೂಡ ದುರುಪಯೋಗಪಡಿಸಿಕೊಂಡಿಲ್ಲ. ತಪ್ಪು ಮಾಡಿದವರು, ಕಾನೂನಿಗೆ ಮಣ್ಣೆರಚಿದವರು ಸಿಕ್ಕಿ ಬೀಳುತ್ತಿದ್ದಾರೆ.

ಕಾನೂನು ಕುಣಿಕೆ ಬಿಗಿಯಾಗಿದ್ದರಿಂದಲೇ ವಿಜಯಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೆಹೆಲ್ ಚೋಕ್ಸಿ ಸೇರಿದಂತೆ ಅನೇಕರು ದೇಶ ಬಿಟ್ಟು ಹೋಗಿದ್ದಾರೆ. ಇವರೆಲ್ಲರಿಗೂ ಬೇಕಾಬಿಟ್ಟಿಯಾಗಿ ಸಾಲ ಕೊಟ್ಟಿದ್ದು ಅಂದಿನ ಯುಪಿಎ ಸರ್ಕಾರ. ಈಗ ನಾವು ಇವರನ್ನು ಹಿಡಿದು ತರುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )