ಕೊಳವೆ ಬಾವಿ, ಕುಡಿಯುವ ನೀರಿನ ಯೋಜನೆಯಡಿ ಭಾರೀ ಗೋಲ್‍ಮಾಲ್: ರಮೇಶ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15-ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಕುಡಿಯುವ ನೀರು ಒದಗಿಸಬೇಕಾದ ನಗರದ ಪುರಪಿತೃಗಳು, ಪಾಲಿಕೆ ಅಧಿಕಾರಿಗಳು ಕೊಳವೆ ಬಾವಿ, ಶುದ್ಧ ನೀರಿನ ಘಟಕಗಳ ನಿರ್ಮಾಣ ಯೋಜನೆಯಲ್ಲಿ ಭಾರೀ ಗೋಲ್‍ಮಾಲ್ ನಡೆಸಿದ್ದಾರೆ.

ಸುಮಾರು 400 ಕೋಟಿ ರೂ.ಗಳ ಅಕ್ರಮದಲ್ಲಿ 40ಕ್ಕೂ ಹೆಚ್ಚು ಕಾಪೆರ್ರೇಪೊಟರ್‍ಗಳು, ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ನಗರದ ಜನರ ಕುಡಿಯುವ ನೀರಿನ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ನಗರದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಗಿದೆ. ಅಂತರ್ಜಲ ಕುಸಿದು ನೀರಿಲ್ಲದೆ ಟ್ಯಾಂಕರ್‍ಗಳಿಂದ ನೀರನ್ನು ಒದಗಿಸಲಾಗುತ್ತಿದೆ. ಆದರೆ ಪಾಲಿಕೆ ಸದಸ್ಯರೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಡಗೂಡಿ ಕುಡಿಯುವ ನೀರಿನ ಯೋಜನೆಯಲ್ಲಿ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದಾರೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ಎನ್. ಆರ್. ರಮೇಶ್ ಸುಮಾರು 273 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬಿಬಿಎಂಪಿಯ ಐದು ವಲಯಗಳ 66 ವಾರ್ಡ್‍ಗಳಲ್ಲಿ ಕೊರೆಸಿರುವ ಕೊಳವೆ ಬಾವಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಈ ಅಕ್ರಮ ನಡೆದಿದೆ. ರಾಜರಾಜೇಶ್ವರಿ ನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಕೆ.ಆರ್.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೋರ್‍ವೆಲ್ ಕೊರೆದು ಆರ್.ಒ.ಪ್ಲಾಂಟ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ.

ಇದಕ್ಕಾಗಿ ಬಿಡುಗಡೆ ಮಾಡಿದ್ದ ಹಣ ಕಳೆದೆರಡು ವರ್ಷಗಳಲ್ಲಿ 970 ಕೋಟಿ ರೂ.ಗಳು ಕೇವಲ ಕೊಳವೆ ಬಾವಿ ಕೊರೆಸಲು 671 ಕೋಟಿ ರೂ., ಆರ್‍ಒ ಪ್ಲಾಂಟ್ ನಿರ್ಮಾಣಕ್ಕೆ 156 ಕೋಟಿ. ಅಧಿಕಾರಿಗಳ ಪ್ರಕಾರ 9,588 ಬೋರ್‍ವೆಲ್ ಹಾಗೂ 976 ಆರ್.ಒ. ಪ್ಲಾಂಟ್ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಒಂದು ಬೋರ್‍ವೆಲ್‍ಗೆ 7 ಲಕ್ಷ, ಆರ್‍ಒ ಪ್ಲಾಂಟ್ ನಿರ್ಮಾಣಕ್ಕೆ 16 ಲಕ್ಷ ಖರ್ಚನ್ನು ಅಧಿಕಾರಿಗಳು ತೋರಿಸಿದ್ದಾರೆ. 66 ವಾರ್ಡ್‍ಗಳಲ್ಲಿ ಬೋರ್‍ವೆಲ್ ಆರ್‍ಒ ಪ್ಲಾಂಟ್ ಘಟಕಗಳ ನಿರ್ಮಾಣಕ್ಕೆ 701.34 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 8,426 ಬೋರ್‍ವೆಲ್, 671 ಆರ್.ಒ ಪ್ಲಾಂಟ್ ನಿರ್ಮಾಣ ಮಾಡಿರುವುದಾಗಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 400 ಕೋಟಿ ರೂ.ಗಳ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು.

ವಾಸ್ತವವಾಗಿ ಆರ್.ಒ. ಪ್ಲಾಂಟ್ ನಿರ್ಮಾಣಕ್ಕೆ 7.5 ಲಕ್ಷ ರೂ. ಮಾತ್ರ ಖರ್ಚಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ಆಗಿರುವ ಗೋಲ್‍ಮಾಲ್‍ನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿರುವ ರಮೇಶ್ ಅವರು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದ ಲೂಟಿ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಐದೂ ವಲಯಗಳ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬೋರ್‍ವೆಲ್‍ಗಳು ಆರ್‍ಒ ಘಟಕಗಳಿಗೆ ಸಂಬಂಧಿಸಿದ ಕಡತಗಳಿಗೆ ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದಾರೆ.

ಹಾಗಾಗಿ ಎಲ್ಲ ಐದೂ ವಲಯಗಳ ಮುಖ್ಯ ಅಭಿಯಂತರರು, ಜಂಟಿ ಆಯುಕ್ತರು, ಕಾರ್ಯಪಾಲಕ ಅಭಿಯಂತರರ ವಿರುದ್ಧ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.

ಕೊಳವೆ ಬಾವಿ ಮತ್ತು ಆರ್‍ಒ ಪ್ಲಾಂಟ್‍ಗಳ ಹೆಸರಿನಲ್ಲಿ ಶೇ.80ಕ್ಕೂ ಹೆಚ್ಚು ಅನುದಾನವನ್ನು ಲೂಟಿ ಮಾಡಿರುವುದು ಅತ್ಯಂತ ದುರದೃಷ್ಟಕರ. ಶೇ.20ಕ್ಕೂ ಕಡಿಮೆಯಷ್ಟು ಕಾರ್ಯಗಳನ್ನು ಮಾತ್ರವೇ ಮಾಡಿರುವುದು ಪರಿಶೀಲನಾ ಸಂದರ್ಭದಲ್ಲಿ ಬಹಿರಂಗವಾಗಿದೆ. ಉಳಿದಂತೆ 142 ಕೋಟಿ 32 ಲಕ್ಷ ರೂ.ಗಳನ್ನು ಒಳಚರಂಡಿ ಕಾರ್ಯಕ್ಕೆ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

400 ಕೋಟಿ ಲೂಟಿ ಹಗರಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮಾನ ಭಾಗಿದಾರರಾಗಿದ್ದಾರೆ. ಇದೊಂದು ದೊಡ್ಡ ಮಟ್ಟದ ಹಗಲು ದರೋಡೆಯಾಗಿದೆ. ಸಮಗ್ರ ತನಿಖೆ ನಡೆಸಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ