‘ಸಮ್ಮಿಶ್ರ ಸರ್ಕಾರಕ್ಕೆ ನನ್ನಿಂದ ಧಕ್ಕೆಯಿಲ್ಲ’ ಸಿಎಂಗೆ ರಮೇಶ್ ಜಾರಕಿಹೊಳಿ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.26- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಯ ಮತದಾನ ಮುಗಿದ ಬಳಿಕ ರಾಜೀನಾಮೆ ನೀಡುವ ಬಗ್ಗೆ ರಮೇಶ್ ಜಾರಕಿ ಹೊಳಿ ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು.

ರಮೇಶ್ ಅವರಿಗೆ ತಮ್ಮ ಬೆಂಬಲಿಗ ಶಾಸಕರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ ಎನ್ನಲಾಗಿದ್ದು, ಈ ನಡುವೆ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಗಮನಕ್ಕೆ ತರುವುದಾಗಿ ಸಿಎಂಗೆ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಿಮ್ಮ ಹಾಗೂ ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೂ ತೊಂದರೆ ಕೊಡುವ ಉದ್ದೇಶ ತಮ್ಮದಲ್ಲ. ಕಾಂಗ್ರೆಸ್‍ನಲ್ಲಿನ ಆಂತರಿಕ ಸಮಸ್ಯೆಯಿಂದಾಗಿ ಅಸಮಾಧಾನವಿದೆ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆಡಳಿತ ವಿಚಾರದ ಕಡೆ ಗಮನ ಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಆಪ್ತ ಶಾಸಕರನ್ನೊಳಗೊಂಡಂತೆ ರಮೇಶ್ ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರನ್ನು ಭೇಟಿಯಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.

ಅಸಮಾಧಾನಗೊಂಡಿರುವ ರಮೇಶ್ ಜಾರಕಿ ಹೊಳಿ ಅವರನ್ನು ಸಮಾಧಾನ ಪಡಿಸುವುದು ಸೇರಿದಂತೆ ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರ ತಪ್ಪಿಸುವ ಕಾರ್ಯತಂತ್ರದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವವರೆಗೂ ಆಪರೇಷನ್ ಕಮಲಕ್ಕೆ ಮುಂದಾಗದಂತೆ ಬಿಜೆಪಿ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಯವರು ಕೂಡ ಸದ್ಯಕ್ಕೆ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬರಲಿದ್ದು, ಅಲ್ಲಿಯವರೆಗೂ ರಾಜ್ಯದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎನ್ನಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )